ಚಾಮರಾಜನಗರ: ಸಾಮಾನ್ಯವಾಗಿ ಮದುವೆಯಲ್ಲಿ ಬಂದ ಅತಿಥಿಗಳಿಗೆ ತಾಂಬೂಲದ ಜೊತೆ ಉಡುಗೊರೆಗಳನ್ನು ಕೊಡುವುದು ವಾಡಿಕೆ. ಆದರೆ ಕೊಳ್ಳೇಗಾಲದಲ್ಲಿ ಮದುವೆಯಲ್ಲಿ ಬಂದ ಅತಿಥಿಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಗಿಡಗಳನ್ನು ಗಿಫ್ಟ್ ಆಗಿ ನೀಡುವ ಮೂಲಕ ಹಸಿರೇ ಉಸಿರು ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪರಿಸರವಾದಿ ಕೃಷ್ಣಮೂರ್ತಿ ಅವರು ಕಳೆದ ಒಂದು ದಶಕದಿಂದ ಪರಿಸರ ಸಂರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಮರಗಳ ಹನನ, ಅಕ್ರಮ ಮರಳು ಸಾಗಾಣಿಕೆ, ಪ್ರಾಣಿಗಳ ಬೇಟೆ, ಮರಗಳ್ಳತನ ವಿರುದ್ಧ ಹೋರಾಟ ನಡೆಸುತ್ತಿರುವ ಇವರು ತಮ್ಮ ಮಗಳ ಮದುವೆಯಲ್ಲೂ ಪರಿಸರ ಕಾಳಜಿ ಮೆರೆದಿದ್ದಾರೆ.
ಕೃಷ್ಣಮೂರ್ತಿ ತಮ್ಮ ಮಗಳ ಮದುವೆಗೆ ಬಂದ ಅತಿಥಿಗಳಿಗೆ ಹಾಗು ಬಂಧು- ಬಾಂಧವರಿಗೆ ತಟ್ಟೆ, ಲೋಟ ಮತ್ತಿತರ ಉಡುಗೊರೆ ಬದಲಿಗೆ ಗಿಡಗಳನ್ನು ನೀಡಿದರೆ ಹೇಗೆ ಎಂದು ಚಿಂತಿಸಿ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.
ಕೊಳ್ಳೇಗಾಲದಲ್ಲಿ ನಡೆದ ತಮ್ಮ ಮಗಳು ಕಾವೇರಿಯ ಮದುವೆಗೆ ಬಂದ ಅತಿಥಿಗಳಿಗೆಲ್ಲಾ ಐದು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೀಡುವ ಮೂಲಕ ತಮ್ಮ ಪರಿಸರ ಕಾಳಜಿ ಮೆರೆದಿದ್ದಾರೆ. ಮಾವು, ಬೇವು, ನೇರಳೆ, ಸೀಬೆ, ನಿಂಬೆ, ಸಪೋಟ, ಹೊಂಗೆ ಮತ್ತಿತರ ಜಾತಿಯ ಗಿಡಗಳನ್ನು ಅತಿಥಿಗಳಿಗೆ ಉಡುಗೊರೆಯಾಗಿ ನೀಡಲಾಯಿತು.
ಕೃಷ್ಣಮೂರ್ತಿ ಅವರ ಈ ಕಾಳಜಿಗೆ ಅರಣ್ಯ ಇಲಾಖೆಯೂ ಕೈಜೋಡಿಸಿತ್ತು. ಜೊತೆಗೆ ಮದುವೆಯಲ್ಲಿ ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ರೋಲ್ ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳಿಗೆ ಕಡಿವಾಣ ಹಾಕಲಾಗಿತ್ತು. ಈ ವಿವಾಹ ಮಹೋತ್ಸವಕ್ಕೆ ಬಂದ ಪ್ರತಿಯೊಬ್ಬರಲ್ಲೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಇದೊಂದು ವಿಭಿನ್ನ ಪ್ರಯತ್ನವಾಗಿತ್ತು.