Tuesday, 16th October 2018

Recent News

ವೋಟರ್ ಐಡಿಯಲ್ಲಿ ಮೂಡಿದ ಮದ್ವೆಯ ಆಮಂತ್ರಣ

ಹಾವೇರಿ: ರಾಜ್ಯ ಚುನಾವಣೆ ಆಯೋಗ ಮತದಾನ ಮಾಡಿ ಅಂತಾ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನ ಮಾಡುತ್ತಿದೆ. ಆದರೆ ಇಲ್ಲೊಬ್ಬರು ಮತದಾನದ ಅರಿವು ಮೂಡಿಸಲಿಕ್ಕೆ ತನ್ನ ಮದ್ವೆಯ ಆಮಂತ್ರಣ ಪತ್ರಿಕೆಯನ್ನು ವೋಟರ್ ಐಡಿಯಲ್ಲಿ ಮಾಡಿಸಿದ್ದಾರೆ.

ಜಿಲ್ಲೆಯ ಹಾನಗಲ್ ತಾಲೂಕಿನ ಉಪ್ಪಣಸಿ ಗ್ರಾಮದಲ್ಲಿ ಮದುವೆಯಾಗುತ್ತಿರುವ ಜೋಡಿ ತಮ್ಮ ಲಗ್ನಪತ್ರಿಕೆಯನ್ನ ವಿಭಿನ್ನ ರೀತಿಯಲ್ಲಿ ಪ್ರಿಂಟ್ ಮಾಡಿಸಿ ಹಂಚುತ್ತಿದ್ದಾರೆ. ಸಿದ್ದಪ್ಪ ಜ್ಯೋತಿಯವರನ್ನು ಇದೇ 27ರಂದು ಮದುವೆಯಾಗಲಿದ್ದಾರೆ. ಆ ಮದುವೆಗೆ ವೋಟರ್ ಐಡಿಯ ಆಮಂತ್ರಣ ಮಾಡಿಸಿದ್ದಾರೆ. ಈ ಮೂಲಕ ಮತದಾನದ ಪ್ರಮಾಣ ಹೆಚ್ಚಿಸುದರ ಜೊತೆಗೆ ಈ ಟ್ರೆಂಡ್ ಅನ್ನು ಹುಟ್ಟು ಹಾಕಿದ್ದಾರೆ.

ಮದುವೆಯ ಕರೆಯೋಲೆಯನ್ನ ಮತದಾರರ ಗುರುತಿನ ಚೀಟಿಯ ಮಾದರಿಯಲ್ಲಿ ಪ್ರಿಂಟ್ ಮಾಡಿಸಿದ್ದಾರೆ. ಕರೆಯೋಲೆಯಲ್ಲಿ ದೊಡ್ಡಚಿಕ್ಕಣ್ಣನವರ ಬಂಧುಗಳ ಮದುವೆ ಸಂಭ್ರಮ ಎಂಬ ತಲೆ ಬರಹ ಹಾಕಿದ್ದು, ಎಸ್‍ಜೆಎಂಆರ್ ಜಿ  27042018 ಎಂದು ವೋಟರ್ ಐಡಿ ಕಾರ್ಡ್‍ನ ನಂಬರ್ ಹಾಕಿದ್ದಾರೆ. ಇದರ ಅರ್ಥ ಸಿದ್ದಪ್ಪ-ಜ್ಯೋತಿ ಮದುವೆ 27-04-2018 ಎಂದು ಅರ್ಥಕೊಡುತ್ತದೆ.

ಕೆಳಗೆ ಮತದಾರರ ಹೆಸರು ಬರುವ ಸ್ಥಳದಲ್ಲಿ ಮದುಮಕ್ಕಳ ಹೆಸರು ಎಂದು ಹಾಕಿ ಚಿ.ಸಿದ್ದಪ್ಪ ಮತ್ತು ಚಿ.ಕು.ಸೌ.ಜ್ಯೋತಿ ಎಂದು ಮುದ್ರಿಸಿದ್ದಾರೆ. ಜನ್ಮ ದಿನಾಂಕದ ಬದಲು ಮದುವೆ ದಿನಾಂಕ ಎಂದು ಮುದ್ರಿಸಿ 27-04-2018, ಸಮಯ 12-30 ಎಂದು ನಮೂದಿಸಿದ್ದಾರೆ. ಮದುವೆ ನಡೆಯುವ ಸ್ಥಳ ಹಾಗೂ ಕುಟುಂಬದ ಹೆಸರು ಮತ್ತು ತಮ್ಮ ಆಗಮನಾಭಿಲಾಷಿಗಳು ಎಂದು ನಮೂದಿಸಿದ್ದಾರೆ.

“ಜೀವ ಉಳಿಸಲು ರಕ್ತದಾನ, ದೇಶಕಟ್ಟಲು ಮತದಾನ, ಮತದಾನ ಮಹಾದಾನ, ಭವಿಷ್ಯದ ರಾಷ್ಟ್ರ ನಿರ್ಮಾಣಕ್ಕೆ ಕಾರಣ, ಮತ ಮಾರಿಕೊಳ್ಳುವ ಹೇಡಿಗಳು ನಾವಲ್ಲ, ಮತವೆಂಬ ಅಸ್ತ್ರ ಬಳಸಿ ಪ್ರಾಮಾಣಿಕರನ್ನು ಆರಿಸುವ ಪ್ರಬುದ್ಧರು ನಾವು” ಎಂಬ ಸಂದೇಶವನ್ನು ಮುದ್ರಿಸಿದ್ದಾರೆ. ಕೊನೆಗೆ ಮದುವೆಗೆ ತಪ್ಪದೇ ಬನ್ನಿ, ಮತದಾನ ಕಡ್ಡಾಯವಾಗಿ ಮಾಡಿ ಎಂಬ ಸಾಲುಗಳು ಮುದ್ರಿಸಿದ್ದಾರೆ. ಈ ಎಲ್ಲಾ ವಿಚಾರ, ಮಾಹಿತಿಗಳು ವೋಟರ್ ಐಡಿಯ ಆಕಾರ, ಮಾದರಿ, ಬಣ್ಣ ಎಲ್ಲವೂ ಚುನಾವಣಾ ಗುರುತಿನ ಪತ್ರದ ಮಾದರಿಯಲ್ಲೇ ರೂಪುಗೊಂಡಿದೆ.

ಇದಕ್ಕೆಲ್ಲ ಜಿಲ್ಲಾಧಿಕಾರಿಗಳು ಸಹಕಾರ ನೀಡಿದ್ದಾರೆ. ಈ ರೀತಿಯಲ್ಲೂ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿಗಳು ಸ್ನೇಹಿತರು ಹರ್ಷವ್ಯಕ್ತಪಡಿಸಿದ್ದಾರೆ ಎಂದು ವರ ಸಿದ್ದಪ್ಪ ಸಂತೋಷದಿಂದ ಹೇಳಿದ್ದಾರೆ.

Leave a Reply

Your email address will not be published. Required fields are marked *