ಮೈಸೂರು: ಬ್ಯಾಂಕ್ ಅಧಿಕಾರಿಗಳಿಂದ ಬಂದ ನೋಟಿಸ್ ನಿಂದ ಕೊರಗಿ ಒಂದು ತಿಂಗಳ ಅಂತರದಲ್ಲಿ ವೃದ್ಧ ದಂಪತಿ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚಿಕ್ಕನಾಯಕ ಹಾಗೂ ಸಿದ್ದಮ್ಮ ಮೃತಪಟ್ಟವರು. ಟ್ರ್ಯಾಕ್ಟರ್ ಖರೀದಿಗಾಗಿ ದಂಪತಿಯ ಪುತ್ರ ಶಿವಣ್ಣ ಸ್ಥಳೀಯ ಎಸ್‍ಬಿಐ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದರು. 7 ಲಕ್ಷ ರೂ. ಸಾಲಕ್ಕಾಗಿ ಮನೆ ಹಾಗೂ ಜಮೀನು ಪತ್ರ ಅಡವಿಟ್ಟಿದ್ದರು. ಬೆಳೆ ಕೈಕೊಟ್ಟ ಕಾರಣ ಸಾಲ ತೀರಿಸುವುದು ವಿಳಂಬವಾಗಿತ್ತು. ಅದ್ದರಿಂದ 7 ಲಕ್ಷ ರೂ. ಸಾಲ ಬಡ್ಡಿ ಸೇರಿ 10 ಲಕ್ಷ ವಾಗಿದೆ. ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿಗಾಗಿ ಒತ್ತಡ ಹೇರಿದಾಗ ಹಂತ ಹಂತವಾಗಿ 5 ಲಕ್ಷ ಮರುಪಾವತಿ ಮಾಡಿದ್ದಾರೆ.
Advertisement
Advertisement
ಪಾವತಿಸಿದ ಹಣವನ್ನು ಬಡ್ಡಿಗೆ ವಜಾ ಮಾಡಿಕೊಂಡ ಅಧಿಕಾರಿಗಳು ಮತ್ತೆ ಹಣಕ್ಕಾಗಿ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ಗ್ರಾಮಪಂಚಾಯ್ತಿ ಕಚೇರಿ ಹಾಗೂ ಗ್ರಾಮದ ಪ್ರಮುಖ ಸ್ಥಳಗಳ ಗೋಡೆಗಳ ಮೇಲೆ ನೋಟಿಸ್ ಅಂಟಿಸಿದ್ದರು. ಹಣ ಮರು ಪಾವತಿಸದಿದ್ದಲ್ಲಿ ಆಸ್ತಿ ಹರಾಜು ಹಾಕುವುದಾಗಿ ಒತ್ತಡ ಹೇರಿದ್ದರು. ಆಸ್ತಿ ಕಳೆದುಕೊಳ್ಳುವುದಲ್ಲದೇ ತಮ್ಮ ಗೌರವಕ್ಕೆ ಧಕ್ಕೆಯಾಗಲಿದೆ ಎಂದು ದಂಪತಿ ಕೊರಗಿದ್ದಾರೆ. ಸಿದ್ದಮ್ಮ ಕೊರಗುತ್ತಲೇ ಹಾಸಿಗೆ ಹಿಡಿದು ಕಳೆದ ತಿಂಗಳು ಸಾವನ್ನಪ್ಪಿದರು. ಪತ್ನಿ ಸಾವನ್ನಪ್ಪಿದ ಕೆಲ ದಿನಗಳ ಅಂತರದಲ್ಲೇ ಪತಿ ಚಿಕ್ಕನಾಯಕ ಅವರು ಸಾವನ್ನಪ್ಪಿದ್ದಾರೆ. ವೃದ್ಧ ದಂಪತಿ ಸಾವಿಗೆ ಬ್ಯಾಂಕ್ ಅಧಿಕಾರಿಗಳ ವರ್ತನೆಯೇ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv