ಬೆಂಗಳೂರು: ಫೇಸ್‍ಬುಕ್ ವಿಚಾರದಲ್ಲಿ ಪತಿ-ಪತ್ನಿ ನಡುವೆ ನಡೆದ ಕಲಹ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೌಮ್ಯ(23), ಅನೂಪ್(34) ಆತ್ಮಹತ್ಯೆ ಗೆ ಶರಣಾದ ದಂಪತಿ. ದಂಪತಿಗಳಿಬ್ಬರು ಹಾಸನ ಮೂಲದವರಾಗಿದ್ದು, ಕಳೆದ ಕೆಲ ವರ್ಷಗಳಿಂದ ಎಂಟನೇ ಮೈಲಿಯಲ್ಲಿ ವಾಸವಾಗಿದ್ದರು.
Advertisement
ಅನೂಪ್ ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮೂರು ವರ್ಷಗಳ ಹಿಂದೆ ಸೌಮ್ಯಾ ಅವರನ್ನು ಮದುವೆ ಆಗಿದ್ದರು. ಅನೂಪ್ ಹಾಗೂ ಸೌಮ್ಯ ದಂಪತಿಗೆ 2 ವರ್ಷದ ಗಂಡು ಮಗುವಿದ್ದು, ಆ ಮಗು ಸೌಮ್ಯ ತವರು ಮನೆಯಲ್ಲಿ ಬೆಳೆಯುತ್ತಿತ್ತು.
Advertisement
ನಡೆದಿದ್ದೇನು?
ಅನೂಪ್ ಮನೆಯಲ್ಲಿದ್ದ ವೇಳೆ ಮೊಬೈಲಿನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು. ವ್ಯಾಟ್ಸಪ್ ಹಾಗೂ ಫೇಸ್‍ಬುಕ್‍ನಲ್ಲಿ ತನ್ನ ಸ್ನೇಹಿತರ ಜೊತೆ ಚಾಟಿಂಗ್ ಮಾಡುತ್ತಾ ಹೆಚ್ಚು ಸಮಯ ವ್ಯರ್ಥ ಮಾಡುತ್ತಿದ್ದರು. ಸೋಮವಾರ ಬೆಳಗ್ಗೆ ಕೂಡ ಅನೂಪ್ ಯುವತಿಯ ಜೊತೆ ಚಾಟಿಂಗ್ ನಡೆಸುತ್ತಿದ್ದರು. ಅದನ್ನು ನೋಡಿದ ಸೌಮ್ಯ ತನ್ನ ಪತಿಯನ್ನು ಪ್ರಶ್ನಿಸಿದ್ದಾರೆ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ನಂತರ ಸೌಮ್ಯ ಅಳುತ್ತಲೇ ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದನ್ನು ನೋಡಿದ ಅನೂಪ್ ಮತ್ತೊಂದು ರೂಮಿಗೆ ಹೋಗಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
Advertisement
ಸಹೋದರನಿಗೆ ಕರೆ ಮಾಡಿದ ಸೌಮ್ಯ:
ಜಗಳ ನಡೆದ ಕೂಡಲೇ ಸೌಮ್ಯ ಸೋಮವಾರಪೇಟೆಯಲ್ಲಿರುವ ತನ್ನ ಸಹೋದರನಿಗೆ ಬೆಳಗ್ಗೆ ಸುಮಾರು 10 ಗಂಟೆಗೆ ಕರೆ ಮಾಡಿದ್ದರು. ಸಹೋದರನಿಗೆ ಕರೆ ಮಾಡಿ, “ಬೆಂಗ್ಳೂರಿಗೆ ಬಂದು ನನ್ನನ್ನು ಕರೆದುಕೊಂಡು ಹೋಗು, ಇಲ್ಲದಿದ್ದರೆ ನಾನು ಸಾಯುತ್ತೇನೆ” ಎಂದು ತಿಳಿಸಿದ್ದರು. ಸೌಮ್ಯ ಮಾತು ಕೇಳಿ ಗಾಬರಿಗೊಂಡ ಸಹೋದರ ಬೆಂಗಳೂರಿನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕರೆ ಮಾಡಿ ಮನೆಯ ಬಳಿ ಹೋಗುವಂತೆ ತಿಳಿಸಿದ್ದರು.
ಸಹೋದರನ ಮಾತು ಕೇಳಿ ಸಂಬಂಧಿಕರು ಸುಮಾರು 12 ಗಂಟೆಗೆ ಸೌಮ್ಯಳ ಮನೆಗೆ ಬಂದಿದ್ದಾರೆ. ಆದರೆ ಅಲ್ಲಿ ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ನಂತರ ಮಧ್ಯಾಹ್ನ ಸುಮಾರು 2 ಗಂಟೆಗೆ ಸಹೋದರ ಸೌಮ್ಯಳ ಮನೆಗೆ ಬಂದು ಕಿಟಕಿ ಬಳಿ ಹೋಗಿ ನೋಡಿದಾಗ ಅನೂಪ್ ಹಾಗೂ ಸೌಮ್ಯ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದಿದೆ. ನಂತರ ಅವರು ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದರು.
ಅನೂಪ್ 5 ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ಮೊದಲು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಅನೂಪ್, ಮೂರು ವರ್ಷಗಳ ಹಿಂದೆ ಅಹಾರ ತಯಾರಿಕಾ ಕಾರ್ಖಾನೆಗೆ ಸೇರಿದ್ದರು. ಅನೂಪ್ ಹಾಗೂ ಸೌಮ್ಯ ಮದುವೆ ಆದಾಗಿನಿಂದಲೂ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಅಲ್ಲದೇ ಇಬ್ಬರ ಆತ್ಮಹತ್ಯೆಗೆ ಫೇಸ್‍ಬುಕ್ ಅಲ್ಲದೇ ಹಲವು ಕಾರಣಗಳಿವೆ. ಅದು ತನಿಖೆ ಮೂಲಕ ಗೊತ್ತಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.