ಶಿವಮೊಗ್ಗ: ಪೊಲೀಸರ ಕಿರುಕುಳ ತಾಳಲಾರದೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗೋಪಾಳದ ಕೊರಮರ ಕೇರಿಯಲ್ಲಿ ನಡೆದಿದೆ.
ರಮೇಶ್(45) ಹಾಗೂ ಮೂಕಾಂಬಿಕಾ(40) ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ. ಇವರು ಶಿವಮೊಗ್ಗದ ಪದ್ಮಟಾಕೀಸ್ ಬಳಿಯ ಕೊರಮರ ಬೀದಿಯ ಮನೆಯಲ್ಲಿ ವಾಸಿಸುತ್ತಿದ್ದು, ರಮೇಶ್ ಡೆಕೊರೇಶನ್ ಕೆಲಸ ಮಾಡುತ್ತಿದ್ದರು. ಆದರೆ ಮೂರು ದಿನದ ಹಿಂದೆಯೇ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಒಂದು ವಾರದ ಹಿಂದೆ ನ್ಯೂಮಂಡ್ಲಿ ಚೆಕ್ ಪೋಸ್ಟ್ ನಲ್ಲಿ ರಮೇಶ್ ಅವರ ಬೈಕನ್ನು ಪೊಲೀಸರು ಪರಿಶೀಲನೆ ನಡೆಸುವ ವೇಳೆ ಎರಡು ಲಕ್ಷ ರೂಪಾಯಿ ದಾಖಲೆ ಇಲ್ಲದ ಹಣ ಪತ್ತೆಯಾಗಿತ್ತು. ಪೊಲೀಸ್ ಪೇದೆಗಳು ಹಣ ಜಪ್ತಿ ಮಾಡುವ ಬದಲು ಹಣ ಪಡೆದು ಪರಾರಿಯಾಗಿದ್ದರು. ಈ ಸಂಬಂಧ ರಮೇಶ್ ಎಸ್ ಪಿ ಕಚೇರಿಗೆ ದೂರು ನೀಡಿದ್ದರು. ತಾನು ಸಾಲ ಮಾಡಿ ಹಣ ತರುತ್ತಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದರು.
ಈ ಪ್ರಕರಣದ ವಿಚಾರಣೆ ಹೆಸರಿನಲ್ಲಿ ಪೊಲೀಸರು ರಮೇಶ್ ಕುಟುಂಬಕ್ಕೆ ನಿರಂತರ ಕಿರುಕುಳ ನೀಡಲಾರಂಭಿಸಿದ್ದಾರೆ. ಇತ್ತ ಹಣವು ಇಲ್ಲದೆ ಪೊಲೀಸರ ಕಿರುಕುಳವನ್ನು ತಾಳಲಾರದೆ ರಮೇಶ್ ದಂಪತಿ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ನೇಣು ಬಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೆರೆ ಮನೆಯವರಿಗೆ ದಂಪತಿಯ ಮನೆಯಿಂದ ದುರ್ವಾಸನೆ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತುಂಗಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದಾಗ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಘಟನೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.