ಬೆಂಗಳೂರು: ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಕೊಡಿಸುವ ಆಸೆ ತೋರಿಸಿ ಲಕ್ಷಾಂತರ ರೂ. ವಂಚಿಸಿರುವ (Fraud case) ಆರೋಪದ ಮೇಲೆ ದಂಪತಿಯನ್ನು ಪೋಲಿಸರು (Police) ಬಂಧಿಸಿದ್ದಾರೆ.
ಬಂಧಿತ ದಂಪತಿಯನ್ನು ಪ್ರಕಾಶ್ ಹಾಗೂ ಮಧು ಎಂದು ಗರುತಿಸಲಾಗಿದೆ. ನಮಗೆ ದೊಡ್ಡ ದೊಡ್ಡ ವ್ಯಕ್ತಿಗಳು, ವಿವಿಧ ಇಲಾಖೆಗಳ ಮುಖ್ಯಸ್ಥರು ಪರಿಚಯವಿದ್ದಾರೆ. ಅವರ ಕಡೆಯಿಂದ ಖಾಲಿ ಇರುವ ಹುದ್ದೆಗಳನ್ನು ಕೊಡಿಸುತ್ತೇವೆ ಎಂದು ಯುವಕರಿಂದ ದಂಪತಿ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಿದ್ದರು. ಬಳಿಕ ಕೆಲಸವನ್ನೂ ಕೊಡಿಸದೇ, ಹಣವನ್ನೂ ವಾಪಸ್ ಕೊಡದೆ ಜನರನ್ನು ವಂಚಿಸುತ್ತಿದ್ದರು. ಇದನ್ನೂ ಓದಿ: ಪ್ರಸಾದ ಸೇವಿಸಿ ಅಸ್ವಸ್ಥಗೊಂಡ 300 ಮಂದಿಗೆ ರಸ್ತೆಯಲ್ಲೇ ಡ್ರಿಪ್ಸ್!
6 ಲಕ್ಷ ರೂ. ವಂಚಿಸಿದ್ದಾರೆ ಎಂದು ದಂಪತಿ ವಿರುದ್ಧ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿತ್ತು. ಇದೀಗ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 2 ಲಕ್ಷ ರೂ. ನಗದು, 4 ಮೊಬೈಲ್ ಫೋನ್‍ಗಳು, ಒಂದು ದ್ವಿಚಕ್ರ ವಾಹನ, 6 ಬ್ಯಾಂಕ್ ಅಕೌಂಟ್‍ಗಳಿಗೆ ಸೇರಿದ 15 ಕ್ರೆಡಿಟ್/ಡೆಬಿಟ್ ಕಾರ್ಡ್ ಗಳು, ಚೆಕ್ ಬುಕ್‍ಗಳು, 11 ವಾಚ್‍ಗಳು, 2 ನಕಲಿ ಚಿನ್ನದ ಬ್ರಾಸ್‍ಲೆಟ್, 1 ಚೈನು, 2 ಉಂಗುರ, 2 ಪೆಂಡೆಂಟ್‍ಗಳು, ಸಿಮ್ ಕಾರ್ಡ್‍ಗಳನ್ನು ಜಪ್ತಿ ಮಾಡಿದ್ದಾರೆ.
ಆರೋಪಿ ದಂಪತಿ ವಿರುದ್ಧ ಬೆಂಗಳೂರು ನಗರದಾದ್ಯಂತ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಯುವಕ ಆತ್ಮಹತ್ಯೆ