ಪ್ರತಿಷ್ಠಿತ ಆಸ್ಕರ್ (Oscars) ಪ್ರಶಸ್ತಿ ಪ್ರದಾನ ಸಮಾರಂಭ ಕ್ಷಣಗಣನೆ ಶುರುವಾಗಿದೆ. ಅಮೆರಿಕಾದ ಕಾಲಮಾನ ಪ್ರಕಾರ ಇಂದು ರಾತ್ರಿಯಿಂದಲೇ ಕಾರ್ಯಕ್ರಮ ಶುರುವಾಗಲಿದೆ. (ಭಾರತೀಯ ಕಾಲಮಾನ ಪ್ರಕಾರ ನಾಳೆ ಬೆಳಗ್ಗೆ 6.30) ಅಮೆರಿಕಾದ ಲಾಸ್ ಏಂಜಲೀಸ್ ( Los Angeles) ಡಾಲ್ಬಿ ಥಿಯೇಟರ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಗತ್ತಿನ ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮವನ್ನು ನೋಡುವುದಕ್ಕಾಗಿಯೇ ಜಗತ್ತಿನ ಮೂಲೆ ಮೂಲೆಗಳಿಂದ ಸಿನಿಮಾ ಪ್ರೇಮಿಗಳು ಆಗಮಿಸುತ್ತಾರೆ.
ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯರು ಹೆಮ್ಮೆ ಪಡುವಂತಹ ಅನೇಕ ಸಂಗತಿಗಳು ನಡೆಯಲಿವೆ. ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಈ ವೇದಿಕೆಯಲ್ಲಿ ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಜ್ಯೂನಿಯರ್ ಎನ್.ಟಿ.ಆರ್ ಹಾಗೂ ರಾಮ್ ಚರಣ್ ಹೆಜ್ಜೆ ಹಾಕಲಿದ್ದಾರೆ. ಈಗಾಗಲೇ ಇಬ್ಬರೂ ಕಲಾವಿದರು ಅಮೆರಿಕಾದಲ್ಲೇ ಬೀಡು ಬಿಟ್ಟಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ರಾಮ್ ಚರಣ್ (Ram Charan) ಬಂದಿದ್ದು, ಅಭಿಮಾನಿಗಳು ಮುಗಿಬಿದ್ದು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ `ಕಾಂತಾರ’ ಶಿವನ ಹುಡುಗಿ
ಅಲ್ಲದೇ, ಆರ್.ಆರ್.ಆರ್ ಸಿನಿಮಾದ ನಾಟು ನಾಟು ಗೀತೆಯೂ ಕೂಡ ಆಸ್ಕರ್ ರೇಸ್ ನಲ್ಲಿದೆ. ಹೀಗಾಗಿ ನಿರ್ದೇಶಕ ರಾಜಮೌಳಿ ಸೇರಿದಂತೆ ಚಿತ್ರತಂಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. ಭಾರತದಿಂದ ಒಂದು ಸಿನಿಮಾ ಮತ್ತು ಎರಡು ಡಾಕ್ಯುಮೆಂಟರಿಗಳು ಪ್ರಶಸ್ತಿಯ ಕಣದಲ್ಲಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ರಾಮ್ ಚರಣ್ ಅಭಿಮಾನಿಗಳ ಜೊತೆ ಬೆರೆಯುವುದಾಗಿ ಮಾತುಕೊಟ್ಟಿದ್ದರು. ಅದರಂತೆ ಅಭಿಮಾನಿಗಳ ಜೊತೆ ಒಂದಷ್ಟು ಹೊತ್ತು ಕಳೆದಿದ್ದಾರೆ. ನೆಚ್ಚಿನ ನಟನನ್ನು ಭೇಟಿ ಮಾಡಲು ಸಾವಿರಾರು ಅಭಿಮಾನಿಗಳು ನೆರೆದಿದ್ದು ವಿಶೇಷ. ಎಲ್ಲರೊಂದಿಗೂ ಖುಷಿಯಿಂದಲೇ ಫೋಟೋಗೂ ಪೋಸ್ ನೀಡಿದ್ದಾರೆ ರಾಮ್ ಚರಣ್. ಆ ಫೋಟೋಗಳು ಕೂಡ ವೈರಲ್ ಆಗಿವೆ.