ChamarajanagarDistrictsKarnatakaLatestMain PostMysuru

ಪ್ರತಿಷ್ಠೆಯ ಫಲಿತಾಂಶಕ್ಕೆ ಶುರುವಾಯ್ತು ಕೌಂಟ್‍ಡೌನ್ – ಅಭ್ಯರ್ಥಿಗಳ ಎದೆಯಲ್ಲಿ ಢವ ಢವ

– ಮೇಲುಗೈ ಸಾಧಿಸುತ್ತಾ ಜಾತಿ ಸಮೀಕರಣ – ಭಾರೀ ಲೆಕ್ಕಾಚಾರದಲ್ಲಿ ಬಿಎಸ್‍ವೈ, ಸಿದ್ದರಾಮಯ್ಯ

ಮೈಸೂರು/ ಚಾಮರಾಜನಗರ: ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಮತ ಎಣಿಕೆ ಆರಂಭವಾಗಿದೆ. ಜೆಎಸ್‍ಎಸ್ ಪದವಿ ಕಾಲೇಜಿನಲ್ಲಿ ನಂಜನಗೂಡು ಕ್ಷೇತ್ರದ ಮತ ಎಣಿಕೆ ನಡೆಯುತ್ತಿದ್ದು, ಸೆಂಟ್‍ಜಾನ್ ಶಾಲೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ.

ನಂಜನಗೂಡಿನಲ್ಲಿ 17 ಸುತ್ತು, ಗುಂಡ್ಲುಪೇಟೆಯಲ್ಲಿ 14 ಸುತ್ತುಗಳಲ್ಲಿ ಎಣಿಕೆ ನಡೆಯಲಿದೆ. ಗುಂಡ್ಲುಪೇಟೆಯಲ್ಲಿ 60 ಅಂಚೆ ಮತಗಳ ಎಣಿಕೆ ಮೊದಲಿಗೆ ನಡೆಯಲಿದೆ. ನಂಜನಗೂಡಿನಲ್ಲಿ ಚುನಾವಣೆಗೆ ಹೊರಗಿನ ಅಧಿಕಾರಿಗಳು, ಸಿಬ್ಬಂದಿ ಬಳಕೆ ಹಿನ್ನೆಲೆಯ್ಲಲಿ ಅಂಚೆ ಮತಗಳು ಇಲ್ಲ.

ನಂಜನಗೂಡಿನಲ್ಲಿ ಚಲಾವಣೆಯಾಗಿರುವ ಒಟ್ಟು 1,56,315 ಮತಗಳ ಎಣಿಕೆ [ 77.56% ] ಹಾಗೂ ಗುಂಡ್ಲುಪೇಟೆಯಲ್ಲಿ ಚಲಾವಣೆಯಾಗಿರುವ ಒಟ್ಟು 1,74,953 ಮತಗಳ ಎಣಿಕೆ [ 87.10% ] ನಡೆಯಲಿದೆ.

ಇಂದು ಬೆಳಗ್ಗೆ 10 ರಿಂದ 11 ಗಂಟೆಯಷ್ಟೊತ್ತಿಗೆ ಉಪ ಚುನಾವಣಾ ಫಲಿತಾಂಶದ ಸ್ಪಷ್ಟ ಮಾಹಿತಿ ಸಿಗಲಿದೆ. ಮತ ಎಣಿಕೆ ಅರಂಭವಾದ 15 ನಿಮಿಷಗಳಲ್ಲೇ ಮೊದಲ ಸುತ್ತಿನ ಫಲಿತಾಂಶ ಲಭ್ಯವಾಗಲಿದೆ. 9 ಗಂಟೆಯಷ್ಟೊತ್ತಿಗೆ ಎರಡು ಕ್ಷೇತ್ರಗಳಲ್ಲಿ ಯಾರ ಮೇಲುಗೈ ಎಂಬ ಮುನ್ಸೂಚನೆ ಸಿಗಲಿದೆ.

ಸಚಿವ ಸ್ಥಾನ ಕಳೆದುಹೋದ ಕೋಪದಲ್ಲಿ ಕಾಂಗ್ರೆಸ್‍ಗೆ ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ನೀಡಿದ್ದರಿಂದ ಅವಧಿಗೂ ಮೊದಲೇ ನಂಜನಗೂಡು ಉಪ ಚುನಾವಣೆ ಎದುರುಗೊಳ್ತು. ಹಾಗಾದ್ರೆ ಈ ಬಾರಿ ನಂಜನಗೂಡು ಕಣದಲ್ಲಿ ಪರಿಣಾಮ ಬೀರಬಹುದಾಗಿದ್ದ ಅಂಶಗಳು ಏನು ಅಂತಾ ನೋಡೋದಾದ್ರೆ:

– ವೀರಶೈವರು, ಪರಿಶಿಷ್ಟ ಮತಗಳ ಪ್ರಾಬಲ್ಯ ಹೊಂದಿರುವ ಕ್ಷೇತ್ರ ನಂಜನಗೂಡು.
– ಸತತ 2 ಬಾರಿ ಕಾಂಗ್ರೆಸ್‍ನಿಂದ ಗೆದ್ದಿದ್ದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್.
– 2 ಲಕ್ಷ ಮತದಾರರಲ್ಲಿ ಶೇಕಡಾ 30ರಷ್ಟು ಪರಿಶಿಷ್ಟ ಜಾತಿ ಮತಗಳು.
– ಶ್ರೀನಿವಾಸ್ ಪ್ರಸಾದ್-ಯಡಿಯೂರಪ್ಪ ಕಾರಣದಿಂದ ಲಿಂಗಾಯಿತ-ಪರಿಶಿಷ್ಟ ಮತಗಳ ಸಮೀಕರಣ ಲೆಕ್ಕಾಚಾರ.
– ಕ್ಯಾಬಿನೆಟ್‍ನಿಂದ ಕೈಬಿಟ್ಟು ದಲಿತ ಸಮುದಾಯಕ್ಕೆ ಅನ್ಯಾಯವೆಂಬ ಆರೋಪ.
– ನಂಜನಗೂಡಲ್ಲಿ ಸ್ವಾಭಿಮಾನ ಸಮಾವೇಶ ನಡೆಸಿ ಕಾಂಗ್ರೆಸ್ ತ್ಯಜಿಸಿದ್ದರ ನಡೆಗೆ ಸಮರ್ಥನೆ.
– 2013ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸ್ಪರ್ಧಿಸಿದ್ದ ಕೆಜೆಪಿಗೆ 28 ಸಾವಿರ ಮತ ಸಿಕ್ಕಿತ್ತು.
– ಸಿಎಂ ಸಿದ್ದರಾಮಯ್ಯ ನಾಯಕತ್ವದಲ್ಲಿ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಮತಗಳ ಧ್ರುವೀಕರಣ.
– ಪರಿಶಿಷ್ಟ, ಹಿಂದುಳಿದ ಮತ – ಶೇಕಡಾ 40-45ರಷ್ಟು ಮತಗಳ ಸಮೀಕರಣದ ಊಹೆಯಲ್ಲಿ ಕಾಂಗ್ರೆಸ್.
– ಈ ಬಾರಿ ಜೆಡಿಎಸ್ ಸ್ಪರ್ಧಿಸದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಸ್ಪರ್ಧೆ.
– ಕಳೆದ ಬಾರಿ ಸೋಲುಂಡಿದ್ದ ಜೆಡಿಎಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ.

ಸಚಿವ ಮಹದೇವಪ್ರಸಾದ್‍ರ ಅಕಾಲಿಕ ನಿಧನದಿಂದ ತೆರವಾಗಿದ್ದ ಕ್ಷೇತ್ರ ಗುಂಡ್ಲುಪೇಟೆಯಲ್ಲಿ ಅನುಕಂಪವೇ ಅನಿವಾರ್ಯ ಮಾನದಂಡವಾದರೆ ಅಚ್ಚರಿಯಿಲ್ಲ. ಹಾಗಾದ್ರೆ ಈ ಬಾರಿ ಗುಂಡ್ಲುಪೇಟೆ ಕಣದಲ್ಲಿ ಪರಿಣಾಮ ಬೀರಬಹುದಾಗಿದ್ದ ಅಂಶಗಳು ಏನು ಅಂತಾ ನೋಡೋದಾದ್ರೆ:

– ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಗೆ ಅನುಕಂಪದ ಅಲೆಯ ಮೇಲೆ ನಂಬಿಕೆ
– ಮಹದೇವ ಪ್ರಸಾದ್ ಪತ್ನಿ ಗೀತಾ ಮಹದೇವಪ್ರಸಾದ್‍ಗೆ ಅನುಕಂಪದ ಅಲೆ?
– ಸತತ 2 ಬಾರಿ ಮಹದೇವಪ್ರಸಾದ್ ವಿರುದ್ಧ ಸೋತಿದ್ದ ಬಿಜೆಪಿ ಅಭ್ಯರ್ಥಿ ನಿರಂಜನ್.
– 2008, 2013ರಲ್ಲಿ ಸೋಲು ಅನುಭವಿಸಿದ್ದ ನಿರಂಜನ್.
– ನಿರಂಜನ್ ತಂದೆ ಶಿವಮಲ್ಲಪ್ಪ ಕೂಡಾ ಮಹದೇವಪ್ರಸಾದ್ ವಿರುದ್ಧ ಸೋತಿದ್ದರು.
– ಈ ಹಿನ್ನೆಲೆಯಲ್ಲಿ ಉಪ ಚುನಾವಣೆಯಲ್ಲಿ ಗೆಲ್ಲಿಸುವಂತೆ ನಿರಂಜನ್ ಅನುಕಂಪದ ವಾದ.
– ಲಿಂಗಾಯಿತ ಪ್ರಾಬಲ್ಯ- ಶೇ.80ರಷ್ಟು ಗೌಡ ಲಿಂಗಾಯಿತ, ಶೇ.20ರಷ್ಟು ಶೆಟ್ಟಿ ಲಿಂಗಾಯಿತ.
– ಗೌಡ ಲಿಂಗಾಯಿತಕ್ಕೆ ಸೇರಿದವರು ನಿರಂಜನ್, ಶೆಟ್ಟಿ ಲಿಂಗಾಯಿತ ಸಮುದಾಯಕ್ಕೆ ಸೇರಿದವರು ಗೀತಾ
– ಜೆಡಿಎಸ್, ಬಿಎಸ್‍ಪಿ ಸ್ಪರ್ಧೆಯಿಲ್ಲ – ಎರಡೂ ಕಳೆದ ಬಾರಿ ಒಟ್ಟು 10 ಸಾವಿರ ಮತ ಗಳಿಸಿದ್ದವು.

Leave a Reply

Your email address will not be published. Required fields are marked *

Back to top button