ಆಧುನಿಕತೆ ಬೆಳೆದರೂ, ಕಾನೂನುಗಳು ಬಿಗಿಯಾದರೂ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮಾತ್ರ ಕಡಿಮೆಯಾಗಿಲ್ಲ. ಎಲ್ಲಾ ಸ್ತರಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಲೇ ಇವೆ. ಪುರುಷ ಪ್ರಧಾನ ವ್ಯವಸ್ಥೆಯ ದಬ್ಬಾಳಿಕೆಗೆ ಮಿತಿ ಇಲ್ಲ ಎನ್ನುವಂತಾಗಿದೆ. ಹೆಣ್ಣು ಸದಾ ಶೋಷಿತೆಯಾಗಿ ಸಮಾಜದಲ್ಲಿ ದುಸ್ಥರ ಬದುಕು ನಡೆಸುವಂತಾಗಿದೆ. ಇದನ್ನು ತಡೆಗಟ್ಟಲು ಹಲವಾರು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆದರೆ, ಕಾನೂನು ವ್ಯಾಪ್ತಿಯನ್ನು ಮೀರಿ ದೌರ್ಜನ್ಯಗಳು ನಡೆಯುತ್ತಿರುವುದು ಸಂತ್ರಸ್ತರಿಗೆ ನ್ಯಾಯ ಸಿಗುವುದು ಸವಾಲಾಗಿದೆ.
ಎಲ್ಲ ವಲಯಗಳಲ್ಲೂ ಪುರುಷರಿಗೆ ಸರಿಸಮಾನರಾಗಿ ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ರಾಜಕೀಯ ವಲಯದಲ್ಲಿ ಮಹಿಳೆಯರ ಪ್ರಾತಿನಿಧ್ಯ ತುಂಬಾ ಕಡಿಮೆ. ಭಾರತದಲ್ಲಿ ಪಕ್ಷದ ಕಾರ್ಯಕರ್ತರು, ಸ್ಥಳೀಯ ನಾಯಕರು, ಚುನಾಯಿತ ಪ್ರತಿನಿಧಿಗಳು ಅಥವಾ ಪಕ್ಷಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸದಸ್ಯರಾಗಿ ಸಂಘಟಿತ ರಾಜಕೀಯದಲ್ಲಿ ಮಹಿಳೆಯರು ಕಡಿಮೆ ಪ್ರಾತಿನಿಧ್ಯ ಹೊಂದಿದ್ದಾರೆ. ಸಂಘರ್ಷ, ದೌರ್ಜನ್ಯವೆಂಬ ಕಲ್ಲು-ಮುಳ್ಳಿನ ಹಾದಿಯಲ್ಲಿ ಸಾಗಬೇಕಾಗಿರುವುದು ವಿವಿಧ ಸ್ತರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಪ್ರಮುಖ ತೊಡಕಾಗಿದೆ. ಮಹಿಳೆಯರ ಮೇಲಿನ ನಿರಂತರ ದಬ್ಬಾಳಿಕೆ, ದೌರ್ಜನ್ಯ ಈಗ ರಾಜಕೀಯ ವ್ಯವಸ್ಥೆಯಿಂದಲೂ ಹೊರತಾಗಿಲ್ಲ.
Advertisement
ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ, ಕಿರುಕುಳ ತಡೆಗಟ್ಟಲು ಜಾರಿಗೊಳಿಸಿದ್ದ ಕಾಯ್ದೆಯಡಿ ರಾಜಕೀಯ ಪಕ್ಷಗಳನ್ನೂ ತರಬೇಕು ಎಂಬ ಕೂಗು ಎದ್ದಿದೆ. ಏನದು ಕಾಯ್ದೆ? ಇದು ಜಾರಿಯಾಗಿದ್ಯಾವಾಗ? ಕಾಯ್ದೆ ವ್ಯಾಪ್ತಿ ಎಷ್ಟಿದೆ? ರಾಜಕೀಯ ಪಕ್ಷಗಳನ್ನು ಇದರ ವ್ಯಾಪ್ತಿಗೆ ಯಾಕೆ ತರಬೇಕು? ಈ ಬಗ್ಗೆ ನ್ಯಾಯಾಲಯ ಹೇಳೋದೇನು?
Advertisement
ಪಾಶ್-2013 ಕಾಯ್ದೆ, ಏನಿದು?
ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ಜೊತೆ ಅನಪೇಕ್ಷಿತ ಲೈಂಗಿಕ ವರ್ತನೆಗಳು, ದೌರ್ಜನ್ಯ, ಸಲ್ಲದ ಮಾತುಗಾರಿಕೆ ಮತ್ತು ಲೈಂಗಿಕ ದೌರ್ಜನ್ಯ ಕಾನೂನುಬಾಹಿರ. ಇದನ್ನು ತಡೆಗಟ್ಟಲು ಜಾರಿಗೆ ತಂದ ಕಾಯ್ದೆಯೇ ‘ಪಾಶ್’. ಈ ಕಾಯ್ದೆಯನ್ನು 2013ರಲ್ಲಿ ಅಂಗೀಕರಿಸಲಾಯಿತು. ಲೈಂಗಿಕ ಕಿರುಕುಳದ ವಿರುದ್ಧ ದೂರು, ವಿಚಾರಣೆಯ ಕಾರ್ಯವಿಧಾನಗಳು ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಇದು ವಿವರಿಸುತ್ತದೆ.
Advertisement
ಆಂತರಿಕ ದೂರು ಸಮಿತಿ ಕಡ್ಡಾಯ?
ವಿಶಾಕಾ ಮಾರ್ಗಸೂಚಿ ಪ್ರಕಾರ, ಪಾಶ್ 2013ರ ಅಧಿನಿಯಮದಡಿ ಯಾವುದೇ ಸರ್ಕಾರಿ/ಖಾಸಗಿ ಸಂಸ್ಥೆಯಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರೆ, ಸಂಘಟಿತ ಸಂಸ್ಥೆಯಾದಲ್ಲಿ ಆಂತರಿಕ ದೂರು ಸಮಿತಿ ರಚಿಸುವುದು ಕಡ್ಡಾಯ.
Advertisement
ವಿಶಾಕಾ ಮಾರ್ಗಸೂಚಿ ಬಂದಿದ್ಹೇಗೆ?
ಸುಪ್ರೀಂ ಕೋರ್ಟ್ 1997ರಲ್ಲಿ ವಿಶಾಕಾ ಮಾರ್ಗಸೂಚಿಗಳನ್ನು ಹಾಕಿತು. ಮಹಿಳಾ ಹಕ್ಕುಗಳ ಗ್ರೂಪ್‌ಗಳಲ್ಲಿ ಒಂದಾಗಿತ್ತು ವಿಶಾಕಾ. ರಾಜಸ್ಥಾನದ ಸಾಮಾಜಿಕ ಕಾರ್ಯಕರ್ತೆ ಭನ್ವಾರಿ ದೇವಿ ಅವರ ಮೇಲಿನ ಸಾಮೂಹಿಕ ಅತ್ಯಾಚಾರದ ಕುರಿತು ವಿಶಾಕಾ ಗ್ರೂಪ್‌ನವರು ಪಿಐಎಲ್ ಸಲ್ಲಿಸಿದ್ದರು. 1992ರಲ್ಲಿ ಭನ್ವಾರಿ ಅವರು 1 ವರ್ಷದ ಮಗುವಿನ ಮದುವೆಯನ್ನು ತಡೆದಿದ್ದರು. ಸೇಡಿನ ಪ್ರತಿಕಾರವಾಗಿ ಮದುವೆ ತಡೆದಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು.
ಪಾಶ್ ಕಾಯ್ದೆ ಮತ್ತೆ ಮುನ್ನೆಲೆಗೆ ಬಂದಿದ್ಯಾಕೆ?
ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ-2013ಯನ್ನು ರಾಜಕೀಯ ಪಕ್ಷಗಳಿಗೂ ಅನ್ವಯಿಸಬೇಕು ಎಂಬ ಪಿಐಎಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಹಿನ್ನೆಲೆಯಲ್ಲಿ ಪಾಶ್ ಕಾಯ್ದೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.
ಸುಪ್ರೀಂ ಕೋಟ್ ಹೇಳಿದ್ದೇನು?
ಲೈಂಗಿಕ ಕಿರುಕುಳದ ವಿರುದ್ಧದ ಹೋರಾಟಕ್ಕೆ ‘ಆಂತರಿಕ ದೂರು ಸಮಿತಿ’ ರಚಿಸಲು, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮೇಲೆ ಮೇಲುಗೈ ಸಾಧಿಸಲು ಸಮರ್ಥ ಅಧಿಕಾರ ಹೊಂದಿರುವ ಚುನಾವಣಾ ಆಯೋಗವನ್ನು ಮೊದಲು ಸಂಪರ್ಕಿಸುವಂತೆ ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ನಿರ್ದೇಶನ ನೀಡಿದೆ. ಸಾಂಪ್ರದಾಯಿಕ ಕಾರ್ಯಸ್ಥಳದ ರಚನೆಯನ್ನು ಹೊಂದಿರುವ ರಾಜಕೀಯ ಪಕ್ಷಗಳಂತಹ ಸಂಸ್ಥೆಗಳಿಗೆ ಪಾಶ್ ಕಾಯ್ದೆ ಹೇಗೆ ಅನ್ವಯಿಸುತ್ತದೆ ಎಂಬ ಚರ್ಚೆ ಹುಟ್ಟುಕೊಂಡಿದೆ.
ಕೇರಳ ಹೈಕೋರ್ಟ್ ತೀರ್ಪೇನು?
ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಮೊದಲು ಪಿಐಎಲ್ ವಿಚಾರಣೆಯನ್ನು ಕೇರಳ ಹೈಕೋರ್ಟ್ ನಡೆಸಿತ್ತು. ರಾಜಕೀಯ ಪಕ್ಷಗಳಲ್ಲಿ ಅದರ ಸದಸ್ಯರೊಂದಿಗೆ ಉದ್ಯೋಗದಾತ-ಉದ್ಯೋಗಿ ಎಂಬುದು ಇಲ್ಲ. ರಾಜಕೀಯ ಪಕ್ಷಗಳು ಯಾವುದೇ ಖಾಸಗಿ ಉದ್ಯಮ, ಸಂಸ್ಥೆ ಎಂದು ರೂಪುಗೊಂಡಿರುವುದಿಲ್ಲ. ಹೀಗಾಗಿ, ರಾಜಕೀಯ ಪಕ್ಷಗಳು ಯಾವುದೇ ಆಂತರಿಕ ದೂರುಗಳ ಸಮಿತಿಯನ್ನು ಮಾಡಲು ಜವಾಬ್ದಾರಿರಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ರಾಜಕೀಯ ಪಕ್ಷಗಳಿಗೆ ಕಾಯ್ದೆ ಅನ್ವಯಿಸಬಹುದೇ?
ಜನರ ಪ್ರಾತಿನಿಧ್ಯ ಕಾಯಿದೆ 1951 (ಆರ್‌ಪಿ ಕಾಯ್ದೆ), ರಾಜಕೀಯ ಪಕ್ಷವನ್ನು ಹೇಗೆ ನೋಂದಾಯಿಸಬೇಕು ಎಂಬುದನ್ನು ನಿಯಂತ್ರಿಸುತ್ತದೆ. ಸೆಕ್ಷನ್ 29ಎ ಅಡಿಯಲ್ಲಿ ‘ಯಾವುದೇ ಅಸೋಸಿಯೇಷನ್ ತನ್ನನ್ನು ರಾಜಕೀಯ ಪಕ್ಷವೆಂದು ಕರೆದುಕೊಳ್ಳಲು ನೋಂದಣಿಗಾಗಿ ಚುನಾವಣಾ ಆಯೋಗಕ್ಕೆ ಅರ್ಜಿ ಹಾಕಬೇಕು. ಪಕ್ಷದ ಹೆಸರು, ಅದರ ಕೇಂದ್ರ ಕಚೇರಿ ಇರುವ ರಾಜ್ಯ, ಪದಾಧಿಕಾರಿಗಳ ಹೆಸರು, ಸ್ಥಳೀಯ ಘಟಕಗಳ ವಿವರ ಮತ್ತು ಸದಸ್ಯರ ಸಂಖ್ಯೆ ಸೇರಿದಂತೆ ವಿವರಗಳು ಅರ್ಜಿಯಲ್ಲಿರಬೇಕು. ಅಪ್ಲಿಕೇಶನ್ ನಿಯಮಗಳು ಮತ್ತು ನಿಬಂಧನೆಗಳ ಜ್ಞಾಪನ ಪತ್ರವನ್ನು ಸಹ ಹೊಂದಿರಬೇಕು. ಪಕ್ಷವು ಭಾರತದ ಸಂವಿಧಾನಕ್ಕೆ ನಿಜವಾದ ನಂಬಿಕೆ ಮತ್ತು ನಿಷ್ಠೆ ಹೊಂದಿರಬೇಕು ಎಂದು ಹೇಳುವ ನಿಬಂಧನೆ ಹೊಂದಿರಬೇಕು. ಈ ಎಲ್ಲ ಕಾರಣಗಳಿಗಾಗಿ ರಾಜಕೀಯ ಪಕ್ಷಕ್ಕೆ ಕಾಯ್ದೆಯನ್ನು ಅನ್ವಯಿಸುವುದು ಕಷ್ಟಕರವಾಗುತ್ತದೆ.
ಪಕ್ಷಗಳಲ್ಲಿ ಕೆಲಸ ಮಾಡಲು ಒಲವು ತೋರುವ ಕಾರ್ಯಕರ್ತರು, ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಕಡಿಮೆ ಸಂವಹನ ಹೊಂದಿರುತ್ತಾರೆ. ಕೆಲಸದ ಸ್ಥಳ ಇಲ್ಲದೇ ಸಾರ್ವಜನಿಕವಾಗಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಒಂದು ವೇಳೆ, ಪಾಶ್ ಕಾಯ್ದೆ ವ್ಯಾಪ್ತಿಗೆ ತರಬೇಕು ಎಂದಾದರೆ, ರಾಜಕೀಯ ಪಕ್ಷದಲ್ಲಿ ಉದ್ಯೋಗದಾತ ಯಾರು ಎಂಬುದನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಪಾಶ್ ಕಾಯ್ದೆಯು ‘ಉದ್ಯೋಗಿ’ ಎಂಬ ಪದಕ್ಕೆ ವ್ಯಾಪಕವಾದ ವ್ಯಾಖ್ಯಾನವನ್ನು ಒದಗಿಸುತ್ತದೆ.
ಇಸಿಐ ನಿಲುವು ಏನು?
ಚುನಾವಣಾ ಆಯೋಗವು ತನ್ನ ಅಧಿಕಾರವನ್ನು ಸಂವಿಧಾನದ 324ನೇ ವಿಧಿಯಿಂದ ಪಡೆದುಕೊಂಡಿದೆ. ಇದು ಸಂಸತ್ತು, ರಾಜ್ಯ ಶಾಸಕಾಂಗಗಳು, ಅಧ್ಯಕ್ಷರ ಕಚೇರಿ ಮತ್ತು ಉಪಾಧ್ಯಕ್ಷರ ಕಚೇರಿಗೆ ಚುನಾವಣೆಗಳ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದ ಅಧಿಕಾರವನ್ನು ಹೊಂದಿದೆ. ಆರ್‌ಪಿ ಕಾಯಿದೆಯಿಂದ ಈ ಅಧಿಕಾರವನ್ನು ಮತ್ತಷ್ಟು ಬಲಪಡಿಸಲಾಗಿದೆ. ಇತರೆ ಕಾನೂನುಗಳ ವಿಚಾರದಲ್ಲಿ ಪಕ್ಷಗಳಿಗೆ ಸಲಹೆಗಳನ್ನು ನೀಡುವ ವಿಧಾನವನ್ನು ಇಸಿಐ ಅವಳಡಿಸಿಕೊಂಡಿದೆ. ಉದಾಹರಣೆಗೆ: ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಪ್ರಕಾರ ಮಕ್ಕಳನ್ನು ಪ್ರಚಾರದಲ್ಲಿ ತೊಡಗಿಸದಂತೆ 2024ರ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಪಕ್ಷಗಳಿಗೆ ಸೂಚನೆ ನೀಡಿತ್ತು.