ನವದೆಹಲಿ: ಆಕ್ಸಿಯಮ್-4 (Axiom-4) ಬಾಹ್ಯಾಕಾಶ ಯಾತ್ರೆಗೆ ದಲಿತ ವ್ಯಕ್ತಿಯನ್ನು ಏಕೆ ಆಯ್ಕೆ ಮಾಡಿಲ್ಲ? ಈ ಬಾರಿ ದಲಿತ ವ್ಯಕ್ತಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಬಹುದಿತ್ತು ಎಂದು ಕಾಂಗ್ರೆಸ್ (Congress) ನಾಯಕ ಉದಿತ್ ರಾಜ್ (Udit Raj) ಹೇಳಿದ್ದಾರೆ.
ಈ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅವರು ವೈಜ್ಞಾನಿಕ ಸಾಧನೆಯನ್ನೂ ಸಹ ರಾಜಕೀಯಗೊಳಿಸುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶದಿಂದ ಮರಳಿದ ಶುಭಾಂಶು ಶುಕ್ಲಾ – ಮಗನನ್ನು ಕಂಡು ಪೋಷಕರು ಭಾವುಕ
ಆಕ್ಸಿಯಮ್-4 ಬಾಹ್ಯಾಕಾಶ ಯಾತ್ರೆಗೆ ಹೋಗಿ ಶುಭಾಂಶು ಶುಕ್ಲಾ (Shubhanshu Shukla) ವಾಪಸ್ ಆಗಿದ್ದಾರೆ. ಈ ಹೊತ್ತಲ್ಲಿ ಕ್ಯಾಪ್ಟನ್ ಶುಕ್ಲಾ ಬದಲಿಗೆ ದಲಿತ ಅಭ್ಯರ್ಥಿಯನ್ನು ಏಕೆ ಆಯ್ಕೆ ಮಾಡಲಾಗಿಲ್ಲ ಎಂದು ಅವರು ಪ್ರಶ್ನೆ ಎತ್ತಿದ್ದಾರೆ. ಇದರಿಂದ ‘ಅರ್ಹತೆ ಮತ್ತು ಮೀಸಲಾತಿ’ ಬಗೆಗಿನ ಚರ್ಚೆ ಆರಂಭಗೊಂಡಿದೆ.
ರಾಕೇಶ್ ಶರ್ಮಾ ಅವರನ್ನು ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಕಳುಹಿಸಿದಾಗ, ಎಸ್‌ಸಿ/ಎಸ್‌ಟಿ/ಒಬಿಸಿ ಸಮುದಾಯಗಳಲ್ಲಿ ಹೆಚ್ಚು ವಿದ್ಯಾವಂತ ಜನರು ಇರಲಿಲ್ಲ ಎನ್ನೋಣ ಬಿಡಿ. ಆದರೆ ಈ ಬಾರಿ, ಈ ಸಮುದಾಯಗಳಿಂದ ಯಾರನ್ನಾದರೂ ಕಳುಹಿಸಬಹುದಿತ್ತು. ಈ ಬಾರಿ, ದಲಿತರನ್ನು ಕಳುಹಿಸುವ ಸರದಿ ಬಂದಿತ್ತು, ನಾಸಾ ಪರೀಕ್ಷೆ ನಡೆಸಿ, ಆಯ್ಕೆ ಮಾಡಿಲ್ಲ. ಶುಕ್ಲಾ ಅವರ ಬದಲಿಗೆ ಯಾವುದೇ ದಲಿತ ಅಥವಾ ಒಬಿಸಿ ವ್ಯಕ್ತಿಯನ್ನು ಕಳುಹಿಸಬಹುದಿತ್ತು ಎಂದಿದ್ದಾರೆ. ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ.
ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿ ಐಎಸ್‌ಎಸ್‌ನಲ್ಲಿ 18 ದಿನಗಳ ವಾಸ್ತವ್ಯದ ಬಳಿಕ ಶುಭಾಂಶು ಶುಕ್ಲಾ ವಾಪಸ್ ಆಗಿದ್ದಾರೆ. ತಮ್ಮ 17 ದಿನಗಳ ವಾಸ್ತವ್ಯದ ಅವಧಿಯಲ್ಲಿ ಗಗನಯಾತ್ರಿಗಳು 60 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದ್ದಾರೆ. ಇದು ಅಂತರರಾಷ್ಟ್ರೀಯ ಸಂಶೋಧನಾ ಪ್ರಯತ್ನಗಳಿಗೆ ಅಮೂಲ್ಯವಾದ ಡೇಟಾವನ್ನು ಕೊಡುಗೆ ನೀಡಿದೆ. ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸ್-4ನ ಸದಸ್ಯರಾದ ಕಮಾಂಡರ್ ಪೆಗ್ಗಿ ವಿಟ್ಸನ್ (ಯುಎಸ್ಎ), ಮಿಷನ್ ಸ್ಪೆಷಲಿಸ್ಟ್ ಸಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ (ಪೋಲೆಂಡ್) ಮತ್ತು ಟಿಬೋರ್ ಕಾಪು (ಹಂಗೇರಿ) ಭೂಮಿಗೆ ವಾಪಸ್ ಆಗಿದ್ದಾರೆ.
2019 ರಲ್ಲಿ ಟಿಕೆಟ್ ನಿರಾಕರಿಸಲ್ಪಟ್ಟ ನಂತರ ಬಿಜೆಪಿಯನ್ನು ತೊರೆದು ಉದಿತ್ ರಾಜ್ ಕಾಂಗ್ರೆಸ್ ಸೇರಿದ್ದರು. ಇದನ್ನೂ ಓದಿ: ಭೂಮಿಗೆ ವಾಪಸ್ ಆದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿ ಸ್ವಾಗತ