ಹುಬ್ಬಳ್ಳಿ: ಕಳಪೆ ಊಟ ನೀಡಿದ್ದೀರಿ ಎಂದು ಆರೋಪಿಸಿ ಹೋಟೆಲ್ ಮಾಲೀಕ ಹಾಗೂ ಸಹಾಯಕರ ಮೇಲೆ ಹಲ್ಲೆ ನಡೆಸಿ ಪುಂಡ ಗ್ರಾಹಕರಿಬ್ಬರು ಪರಾರಿಯಾದ ಘಟನೆ ನಗರದ ಹೋಟೆಲ್‍ವೊಂದರಲ್ಲಿ ನಡೆದಿದೆ.
ಹೋಟೆಲ್ ಮಾಲೀಕ ನಾರಾಯಣಶೆಟ್ಟಿ ಮತ್ತು ಸಿಬ್ಬಂದಿ ಪ್ರಕಾಶ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ್ದಾರೆ. ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ ಸಮೀಪದ ಬ್ರಹ್ಮ ಶ್ರೀ ಹೋಟೆಲ್ ನಲ್ಲಿ ಘಟನೆ ನಡೆದಿದೆ. ಹೋಟೆಲ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಹಲ್ಲೆಯ ದೃಶ್ಯಗಳು ಸೆರೆಯಾಗಿದೆ.
ನಡೆದಿದ್ದು ಏನು?
ಬುಧವಾರ ರಾತ್ರಿ ಹೋಟೆಲ್ ಊಟಕ್ಕೆಂದು ಬಂದಿದ್ದ ನಾಲ್ವರು ಊಟ ಸರಿಯಾಗಿಲ್ಲವೆಂದು ಆರೋಪಿಸಿ ಮೂವರು ಹೊರಹೋಗಿದ್ದಾರೆ. ಆದರೆ ಅವರಲ್ಲಿ ಒಬ್ಬ ಹಣ ಪಡೆಯುತ್ತಿದ್ದ ಹೋಟೆಲ್ ಸಿಬ್ಬಂದಿ ಪ್ರಕಾಶ್ ಜೊತೆಗೆ ವಾಗ್ವಾದಕ್ಕೆ ಮುಂದಾಗಿದ್ದಾನೆ. ಮಾತಿನ ಚಕಮಕಿ ಹೆಚ್ಚಾಗಿದ್ದು, ಹೊರಗಿದ್ದ ಮೂವರು ಒಳಗೆ ಬಂದು ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಹೋಟೆಲ್‍ನಲ್ಲಿದ್ದ ಹೆಲ್ಮೆಟ್, ಬಾಟಲ್ ಬಾಕ್ಸ್ ಎತ್ತಿಕೊಂಡು ಪ್ರಕಾಶ್ ಗೆ ಮನಬಂದಂತೆ ಥಳಿಸಿದ್ದು, ಇದನ್ನು ತಡೆಯಲು ಬಂದ ಮಾಲೀಕ ನಾರಾಯಣ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ನಂತರ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಕಿತ್ತುಹಾಕಿ ಪರಾರಿಯಾಗಿದ್ದಾರೆ.
ಹೋಟೆಲ್ ಸಿಬ್ಬಂದಿ ಪ್ರಕಾಶ್ ತಲೆಗೆ ಗಂಭೀರಗಾಯವಾಗಿದ್ದು, ಸದ್ಯ ಕಿಮ್ಸ್‍ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.