ಬೆಂಗಳೂರು: ವಿಧಾನಸಭೆಯ ಸಭಾಂಗಣ ನವೀಕರಣಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರೆ ಅನ್ನೋದು ಹಳೇ ಸುದ್ದಿ. ಆದ್ರೆ ಈಗ ಸಭಾಂಗಣಕ್ಕೆ ಖರ್ಚು ಮಾಡಿರೋ ಕೋಟಿ ಕೋಟಿ ಹಣದಲ್ಲೂ ಅಕ್ರಮ ಆಗಿದೆ ಅನ್ನೋ ಅನುಮಾನ ಮೂಡಿದೆ.
2011-12ನೇ ಸಾಲಿನಲ್ಲಿ ವಿಧಾನಸಭೆಯ ಸಭಾಂಗಣದ 1 ಹಾಗೂ 2ನೇ ಮಹಡಿಯ ನವೀಕರಣಕ್ಕೆ ಸರ್ಕಾರ ಸುಮಾರು 15 ಕೋಟಿ ರೂ. ಹಣ ಖರ್ಚು ಮಾಡಲಾಗಿದೆ. ಆದ್ರೆ, ಕಾಮಗಾರಿ ನಡೆದು 4 ವರ್ಷದ ನಂತರ ಅಕ್ರಮದ ನಡೆದಿರೋ ಬಗ್ಗೆ ಅನುಮಾನ ಹುಟ್ಟಿದೆ. ಲೋಕೋಪಯೋಗಿ ಇಲಾಖೆಯ ದಾಖಲಾತಿಗಳು ಇದರ ಇಂಚಿಂಚು ಮಾಹಿತಿಯನ್ನ ಬಿಚ್ಚಿಟ್ಟಿದೆ.
Advertisement
ಕಾಮಗಾರಿಗೆ ವಿರೋಧಿಸಿದ್ದವರೇ ಗ್ರೀನ್ ಸಿಗ್ನಲ್ ಕೊಟ್ರು!: ಅಂದಿನ ಸ್ಪೀಕರ್ ಕೆ.ಜಿ ಬೋಪಯ್ಯ ಕಾಮಗಾರಿಯ ಮೊತ್ತಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ರು. ಆದಾಗ್ಯೂ ನಿಗದಿಪಡಿಸಿದ್ದಕ್ಕಿಂತ ಹೆಚ್ಚುವರಿ 2 ಕೋಟಿ ಹಣದ ಜೊತೆ ಕಾಮಗಾರಿ ಪಾಸ್ ಆಗಿರೋದೇ ಈ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
Advertisement
ಶಾಸಕರ ಕುರ್ಚಿ, ಲೆದರ್ ಸೋಫಾ ಸೆಟ್, ಟೇಬಲ್ ಟೀಪಾಯಿ, ಎಲ್‍ಇಡಿ ಡಿಸ್ಪ್ಲೇ, ಧ್ವನಿವರ್ಧಕ, ಲೈಂಟಿಂಗ್ಸ್ ಸೇರಿದಂತೆ ವಿವಿಧ ಕಾಮಗಾರಿ ನಡೆಸಲು 2010ರಲ್ಲಿ ಅಂದಿನ ಸ್ಪೀಕರ್ ನಿರ್ಧಾರ ಮಾಡಿದ್ರು. ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆ ಹಾಗೂ ಸರ್ಕಾರದ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ ರಿಪೋರ್ಟ್ ರೆಡಿ ಮಾಡಿಸಿದ್ರು. ಮೊದಲ ರಿಪೋರ್ಟ್‍ನಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಿವಿಲ್ ವರ್ಕ್‍ಗಾಗಿ 3 ಕೋಟಿ ರೂ., ವಿದ್ಯುತ್ ಕಾಮಗಾರಿಗೆ 8 ಕೋಟಿ ರೂ. ಅಂದಾಜು ನೀಡಿದ್ರು. ಸಮಿತಿಯ ಸಭೆ ಸೇರುವ ಹೊತ್ತಿಗೆ ಈ ಮೊತ್ತವನ್ನ 5.90 ಕೋಟಿ ಹಾಗೂ 9.18 ಕೋಟಿಗೆ ಹೆಚ್ಚಳ ಮಾಡಲಾಗಿತ್ತು. ಸಭೆಯಲ್ಲಿ ಸ್ವತಃ ಸ್ಪೀಕರ್ ಇದಕ್ಕೆ ವಿರೋಧ ವ್ಯಕ್ತಪಡಿಸಿ ಮತ್ತೆ ಎಸ್ಟಿಮೇಟ್ ಮಾಡಲು ತಿಳಿಸಿದ್ರು. ಅಧಿಕಾರಿಗಳು ಸಿವಿಲ್ ಕಾಮಗಾರಿಯಲ್ಲಿ 1 ಕೋಟಿ ರೂ. ಕಡಿಮೆ ಮಾಡಿ ವಿದ್ಯುತ್ ಕಾಮಗಾರಿಯಲ್ಲಿ 2 ಕೋಟಿ ರೂ. ಹೆಚ್ಚಳ ಮಾಡಿ ಒಟ್ಟಾರೆ 15 ಕೋಟಿ ರೂ.ಗೆ ಎಸ್ಟಿಮೇಟ್ ಕೊಟ್ರು. ಮೊದಲ ಸಭೆಯಲ್ಲಿ ವಿರೋಧಿಸಿದ್ದ ಸ್ಪೀಕರ್ ಎರಡನೇ ಸಭೆಯಲ್ಲಿ ಮರು ಮಾತಾಡದೆ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಂದ್ರೆ ಬರೋಬ್ಬರಿ 3 ಕೋಟಿ ರೂ. ಹೆಚ್ಚುವರಿ ಎಸ್ಟಿಮೇಟ್ ನೀಡಿದ್ದಾರೆ. ಹೆಚ್ಚಳಕ್ಕೆ ಕಾರಣ ಡಾಲರ್ ಬೆಲೆ ಹೆಚ್ಚಳ ಅನ್ನೋದು ಅಧಿಕಾರಿಗಳ ಮಾತು.
Advertisement
Advertisement
ಟೆಂಡರ್ ಕಾಮಗಾರಿಯಲ್ಲೂ ಅವ್ಯವಹಾರ?: ಕಾಮಗಾರಿ ಮೊತ್ತ ಹೆಚ್ಚಿಸಿದ್ದು ಒಂದು ಕಡೆಯಾದ್ರೆ ಟೆಂಡರ್ ಪ್ರಕ್ರಿಯೆಯೇ ಅಕ್ರಮವಾಗಿ ನಡೆದಿದೆ ಅನ್ನೋ ಅನುಮಾನ ಕೂಡಾ ವ್ಯಕ್ತವಾಗಿದೆ. ಯಾರು ಟೆಂಡರ್ ಪ್ರಕ್ರಿಯಲ್ಲಿ ಭಾಗವಹಿಸಿದ್ರು? ಪ್ರಕ್ರಿಯೆ ನಡೆದಿದ್ದು ಹೇಗೆ ಅನ್ನೋ ಮಾಹಿತಿಯನ್ನ ಆರ್‍ಟಿಐನಲ್ಲಿ ಕೇಳಿದ್ರೆ ಲೋಕೋಪಯೋಗಿ ಇಲಾಖೆ ಮಾಹಿತಿ ನೀಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಮರಿಲಿಂಗೇಗೌಡ ಮಾಲೀ ಪಾಟೀಲ್ ಹೇಳಿದ್ದಾರೆ.
ಅಗ್ರಿಮೆಂಟ್ ಪ್ರಕಾರ ವಿದೇಶದಿಂದ ತರಿಸಿದ ಮೆಟೀರಿಯಲ್‍ಗಳನ್ನ ಹಾಕಬೇಕಿತ್ತು. ಆದ್ರೆ ವಿದೇಶಿ ವಸ್ತುಗಳನ್ನ ಬಳಸಿಲ್ಲ ಅನ್ನೋ ಆರೋಪಗಳು ಕೇಳಿ ಬರುತ್ತಿದೆ. ಪತ್ರಕರ್ತರ ಗ್ಯಾಲರಿಯಲ್ಲಿ ಹೈ ಟೆಕ್ನಾಲಜಿಯ ಎಲ್‍ಸಿಡಿ ಬೋರ್ಡ್, ದೊಡ್ಡ ಎಲ್‍ಸಿಡಿ ಪರದೆ ಅಳವಡಿಕೆಯಾಗಿಲ್ಲ. ಹೀಗಾಗಿ 15 ಕೋಟಿ ರೂ. ಕಾಮಗಾರಿಯಲ್ಲಿ ಅಕ್ರಮಗಳು ನಡೆದಿರೋ ಬಗ್ಗೆ ಸಾಕಷ್ಟು ಅನುಮಾನ ಮೂಡಿಸಿದೆ.