ಸರ್ಕಾರಿ ಇಲಾಖೆಯ ಪತ್ರ ವ್ಯವಹಾರಗಳು ಕನ್ನಡದಲ್ಲೇ ಆಗಬೇಕು: ಟಿ.ಎಸ್.ನಾಗಾಭರಣ

Public TV
2 Min Read
T S Nagabharana

ಬೆಳಗಾವಿ: ಜಿಲ್ಲೆಯ ಗಡಿ ಭಾಗದ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರಿ ಪತ್ರ ವ್ಯವಹಾರಗಳು ಕನ್ನಡ ಭಾಷೆಯಲ್ಲಿಯೇ ಆಗಬೇಕು. ಈ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಜೊತೆ ಚರ್ಚೆ ನಡೆಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್.ನಾಗಾಭರಣ ಹೇಳಿದರು.

ನಗರದ ಅತಿಥಿ ಗೃಹದಲ್ಲಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಹಾಗೂ ಕನ್ನಡಪರ ಸಂಘಟನೆಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲ ಉದ್ದೇಶ ರಾಜ್ಯದಲ್ಲಿ ಕನ್ನಡದಲ್ಲಿ ಆಡಳಿತ ವ್ಯವಹಾರ ನಡೆಯುವಂತೆ ನೋಡಿಕೊಳ್ಳುವುದಾಗಿದೆ. ಗಡಿ ಭಾಗದಲ್ಲಿ ಆಗುತ್ತಿರುವ ಭಾಷಾ ಸಮಸ್ಯೆಯನ್ನು ಪರಿಹರಿಸಲು, ಸರ್ಕಾರಿ ಇಲಾಖೆಯಲ್ಲಿ ಎಷ್ಟರ ಮಟ್ಟಿಗೆ ಕನ್ನಡ ಭಾಷೆಯಲ್ಲಿ ಪತ್ರ ವ್ಯವಹಾರಗಳು ಆಗುತ್ತಿವೆ ಎಂದು ಪರಿಶೀಲನೆ ಮಾಡುವುದಾಗಿ ಅವರು ಹೇಳಿದರು.

T S Nagabharana 1

ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ 8ನೇ ತರಗತಿಯವರೆಗೆ ಪ್ರಾದೇಶಿಕ ಭಾಷೆ ಕನ್ನಡವನ್ನು ಪ್ರಥಮ ಭಾಷೆಯಾಗಿ ವಿದ್ಯಾಭ್ಯಾಸ ಮಾಡಿಸಬೇಕಿದೆ. ಬಳಿಕ ವಿದ್ಯಾರ್ಥಿಗಳ ಇಷ್ಟದ ಭಾಷೆಯಲ್ಲಿ ಶಿಕ್ಷಣ ಪಡೆಯುವಂತೆ ಆಯ್ಕೆ ನೀಡಬಹುದು. ಡಿಗ್ರಿ ವಿಭಾಗದಲ್ಲಿ ವಿದ್ಯಾರ್ಥಿಗಳು ತಮಗೆ ಬೇಕಾದ ಭಾಷೆಯಲ್ಲಿ ಶಿಕ್ಷಣ ಪಡೆಯಬಹುದು. ಆದರೆ ಯಾವುದೇ ಶಿಕ್ಷಣ ಸಂಸ್ಥೆಯವರು ಕನ್ನಡವನ್ನು ಬದಿಗೊತ್ತಿ ಬೇರೆ ಭಾಷೆಯನ್ನು ತೆಗೆದುಕೊಳ್ಳುವಂತೆ ಒತ್ತಾಯ ಮಾಡುವಂತಿಲ್ಲ ಎಂದರು. ಇದನ್ನೂ ಓದಿ: ಸೋಮವಾರ ದೇಶದ 15ನೇ ರಾಷ್ಟ್ರಪತಿ ಚುನಾವಣೆ – ಜೂನ್ 21ಕ್ಕೆ ಮತ ಎಣಿಕೆ

ಗಡಿ ಭಾಗದಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಬೇರೆ ಭಾಷೆಯನ್ನು ತೆಗೆದುಕೊಳ್ಳಲು ಒತ್ತಾಯ ಮಾಡುತ್ತಿರುವ ವಿಚಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಶಿಕ್ಷಣದಲ್ಲಿ ಕನ್ನಡ ಭಾಷೆ ವಿಚಾರವನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದು ಶಿಸ್ತಿನ ಕ್ರಮ ತೆಗೆದುಕೊಳ್ಳವಂತೆ ಮಾಡುವುದಾಗಿ ಹೇಳಿದರು.

T S Nagabharana 2

ಕನ್ನಡ ಬಾವುಟ ಹಾರಿಸುವ, ಕನ್ನಡ ನಾಮಫಲಕಗಳ ಬಳಕೆ ವಿಚಾರವಾಗಿ ಮಹಾನಗರ ಪಾಲಿಕೆಯ ಅಧಿಕಾರಿಗಳ ಜೊತೆ ಹಾಗೂ ಶಿಕ್ಷಣ ವಿಷಯಕ್ಕೆ ಸಂಬಂಧಿಸಿದಂತೆ ಸಾರಿಗೆ ಸೌಲಭ್ಯ ವಿಚಾರವಾಗಿ ಸಾರಿಗೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದರು. ಇದನ್ನೂ ಓದಿ: ಜಿಎಸ್‌ಟಿ ಶಾಕ್ – ಯಾವ ಯಾವ ವಸ್ತುಗಳ ಬೆಲೆ ಎಷ್ಟೆಷ್ಟು ಏರಿಕೆ?

ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಹಾಗೂ ಕನ್ನಡಪರ ಸಂಘಟನೆಗಳು ನೀಡಿದ ಕನ್ನಡ ಭಾಷೆ ಅನುಷ್ಠಾನ ಕುರಿತ ಸಮಸ್ಯೆಗಳನ್ನು ಸೋಮವಾರ(ಜು.18) ನಡೆಯುವ ಜಿಲ್ಲಾಮಟ್ಟದ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡಲಾಗುವುದು ಎಂದು ನಾಗಾಭರಣ ಹೇಳಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *