ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಲೆಕ್ಷನ್ ಮುಂದೂಡಿಕೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ್ದ ಪ್ಲ್ಯಾನ್ ವಿಫಲವಾಗಿದೆ. ಆದರೂ ಈ ಬಾರಿ ಮೇಯರ್ ಪಟ್ಟ ಬಿಜೆಪಿಗೆ ಲಭಿಸುವುದು ಬಹುತೇಕ ಖಚಿತವಾಗಿದೆ.
ಮೇಯರ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರೊಂದಿಗಿನ ವೈಮನಸ್ಸಿನ ಕಾರಣದಿಂದ ಚುನಾವಣೆ ಮುಂದೂಡಲು ಸಿಎಂ ಸಿದ್ಧತೆ ನಡೆಸಿದ್ದರು. ಇಂದು ಬೆಳಗ್ಗೆ ಇನ್ನೊಂದು ತಿಂಗಳು ಎಲೆಕ್ಷನ್ ಮುಂದೂಡಿಕೆಯಾಗಿದೆ ಎಂದೂ ಹೇಳಿಕೆ ನೀಡಿದ್ದರು. ಆದರೆ ಮಧ್ಯಾಹ್ನ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿ ಬೆಂಗಳೂರು ಪ್ರಾದೇಶಿಕ ಆಯುಕ್ತ ಹರ್ಷಾಗುಪ್ತ, ಮಂಗಳವಾರವೇ ಎಲೆಕ್ಷನ್ ನಡೆಸುವುದಾಗಿ ಘೋಷಿಸಿದ್ದಾರೆ.
Advertisement
Advertisement
ಬಿಬಿಎಂಪಿ ಮೇಯರ್ ಚುನಾವಣೆಗೆ ಯಾರಿಗೂ ಅಗತ್ಯ ಸಂಖ್ಯಾಬಲವಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿದ್ದು, ಕಾಂಗ್ರೆಸ್‍ಗೆ ಮೇಯರ್ ಸ್ಥಾನ ಬಿಟ್ಟು ಕೊಡಲು ಜೆಡಿಎಸ್ ಒಪ್ಪಿದೆ. ಆದರೆ ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಸಂಖ್ಯಾ ಬಲವೆರಡೂ ಸೇರಿದರೆ ಸಂಖ್ಯೆ 125 ಆಗುತ್ತದೆ. ಪರಿಣಾಮ 7 ಮಂದಿ ಪಕ್ಷೇತರ ಸದಸ್ಯರು ಕೈ ಹಿಡಿದರಷ್ಟೇ ಗೆಲುವು ಸುಲಭವಾಗಲಿದೆ.
Advertisement
ಪಾಲಿಕೆಯ 198 ಮಂದಿಯ ಜೊತೆಗೆ ಶಾಸಕರು, ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು ಸೇರಿದಂತೆ ಒಟ್ಟು 257 ಮಂದಿ ಮತದಾನ ಮಾಡಲಿದ್ದಾರೆ. ಮೇಯರ್ ಸ್ಥಾನ ಪಡೆಯಲು 129 ಮತಗಳ ಅಗತ್ಯವಿದೆ.
Advertisement
ಕಾಂಗ್ರೆಸ್, ಜೆಡಿಎಸ್ ಬಲಾಬಲ:
76 ಸದಸ್ಯರಿದ್ದು, 1 ಸಂಸದ, 11 ಎಂಎಲ್‍ಎ, 6 ಎಂಎಲ್‍ಸಿ, 6 ರಾಜ್ಯ ಸಭೆ ಸದಸ್ಯರು ಸೇರಿದರೆ 104 ಮತಗಳು ಕಾಂಗ್ರೆಸ್ ಪರ ಇದೆ. ಇತ್ತ ಜೆಡಿಎಸ್ 14 ಸದಸ್ಯರು ಹಾಗೂ 1 ಎಂಎಲ್‍ಎ, 5 ಎಂಎಲ್‍ಸಿ, 1 ರಾಜ್ಯಸಭಾ ಸದಸ್ಯರು ಸೇರಿದರೆ 21 ಮತಗಳನ್ನು ಹೊಂದಿದೆ. ಸದ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿರುವುದರಿಂದ ಒಟ್ಟು 125 ಮತಗಳು ಲಭ್ಯವಾಗಲಿದೆ.
ಬಿಜೆಪಿ ಎಷ್ಟಿದೆ?
101 ಸದಸ್ಯರು ಸೇರಿದಂತೆ 4 ಎಂಪಿ, 11 ಎಂಎಲ್‍ಎ, 7 ಎಂಎಲ್‍ಸಿ, 2 ರಾಜ್ಯ ಸಭಾ ಸದಸ್ಯರು ಸೇರಿ ಒಟ್ಟು 125 ಮತಗಳು ಬಿಜೆಪಿ ಬಳಿಯಿದೆ. ಪರಿಣಾಮ ಉಳಿದಿರುವ 7 ಪಕ್ಷೇತರ ಸದಸ್ಯರ ಬೆಂಬಲ ನಿರ್ಣಯಕವಾಗಿದ್ದು, ಇದರಲ್ಲಿ ಈಗಾಗಲೇ ಐವರು ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡಿರುವುದರಿಂದ ಈ ಬಾರಿ ಬಿಜೆಪಿಗೆ ಮೇಯರ್ ಪಟ್ಟ ಲಭಿಸುವುದು ಬಹುತೇಕ ಖಚಿತವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೂ ಅಂತಿಮ ಕ್ಷಣದಲ್ಲಿ ಬಿಜೆಪಿ ನಾಯಕರು ಮೈಮರೆತ ಕಾರಣ ಮೇಯರ್ ಪಟ್ಟ ಕೈ ತಪ್ಪಿತ್ತು. ಹೀಗಾಗಿ, ಕೇಂದ್ರ, ರಾಜ್ಯದಲ್ಲಿ ಅಧಿಕಾರದ ಜೊತೆಗೆ ಬೆಂಗಳೂರಲ್ಲಿ ಅಧಿಕಾರ ಪಡೆಯಲು ವಿಧಾನಸಭೆಯಂತೆ ಬಿಬಿಎಂಪಿಯಲ್ಲೂ ಗೆಲುವು ಪಡೆಯಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಐವರು ಅನರ್ಹ ಶಾಸಕರ ಬೆಂಬಲಿಗ ಪಾಲಿಕೆ ಸದಸ್ಯರು ಗೈರಾಗುವಂತೆ ನೋಡಿಕೊಳ್ಳುವ ಮೂಲಕ 7 ಪಕ್ಷೇತರ ಕಾರ್ಪೊರೇಟರ್‍ಗಳನ್ನು ಸೆಳೆದು ಅಧಿಕಾರ ಪಡೆಯುವ ಸಿದ್ಧತೆಯಲ್ಲಿ ಬಿಜೆಪಿ ನಾಯಕರಿದ್ದಾರೆ.