ಬೆಂಗಳೂರು: ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ಕೊಡದ ಹೊರತು ನಿಗಮ ಮಂಡಳಿ ನೇಮಕ ಬೇಡ ಎಂದು ರಾಹುಲ್ ಗಾಂಧಿ (Rahul Gandhi) ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಶಾಸಕರ ಪಟ್ಟಿ ಸಮರ್ಥಿಸಿಕೊಳ್ಳಲು ಮುಂದಾದ ಸಿದ್ದರಾಮಯ್ಯ (Siddaramaiah) ಇರಿಸು ಮುರಿಸಿಗೆ ಒಳಗಾಗಿದ್ದಾರೆ. ರಾಹುಲ್ ಗಾಂಧಿ ಮುಂದೆ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಸಹ ಕಾರ್ಯಕರ್ತರ ಪರ ಮಾತನಾಡಿ ಸಿಎಂಗೆ ಮತ್ತಷ್ಟು ಮುಜುಗರ ಉಂಟು ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅಜಿತ್ ಪವಾರ್, ಶಿಂಧೆಯ ಪೈಕಿ ಯಾರು ಮೊದಲು ಬರುತ್ತಾರೋ ಕಾದುನೋಡಿ – ಕರ್ನಾಟಕ ಕಾಂಗ್ರೆಸ್ ಬಗ್ಗೆ ಹೆಚ್‌ಡಿಕೆ ಬಾಂಬ್
ಮೊದಲಿನಿಂದಲೂ ಕಾರ್ಯಕರ್ತರ ಪರ ಡಿಕೆಶಿ ಲಾಬಿ ಮಾಡುತ್ತಿದ್ದರು. ಆದರೆ ಸದ್ಯಕ್ಕೆ ಶಾಸಕರಿಗಷ್ಟೆ ಅವಕಾಶ ಕೊಡೋಣ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ಇಬ್ಬರು ಒಮ್ಮತಕ್ಕೆ ಬಂದ ಮೇಲೆ ದೆಹಲಿಗೆ ಬನ್ನಿ ಎಂದು ಹೈಕಮಾಂಡ್ ಹೇಳಿತ್ತು.
ನಿನ್ನೆ ದೆಹಲಿಯಲ್ಲಿ ನಡೆದಿದ್ದು ಏನು?
ಡಿಕೆಶಿ ನಿವಾಸಕ್ಕೆ ತೆರಳಿದ ಸಿದ್ದರಾಮಯ್ಯ ಲೋಕಸಭೆ ದೃಷ್ಟಿಯಿಂದ ಶಾಸಕರಿಗಷ್ಟೆ ಅವಕಾಶ ಸಾಕು ಎಂದು ಮನವೊಲಿಕೆ ಮಾಡಲು ಪ್ರಯತ್ನಿಸಿದ್ದರು. ಒಲ್ಲದ ಮನಸ್ಸಿನಿಂದಲೇ ಸಿದ್ದರಾಮಯ್ಯ ಪ್ರಪೋಸಲ್‌ಗೆ ಓಕೆ ಎಂದಿದ್ದಾರೆ ಡಿಕೆಶಿ. ರಾಹುಲ್ ಗಾಂಧಿಗೆ ನಿಗಮ ಮಂಡಳಿಗೆ ಶಾಸಕರ ಹೆಸರಿನ ಪಟ್ಟಿ ನೀಡುತ್ತಿದ್ದಂತೆ ಕಾರ್ಯಕರ್ತರ ಹೆಸರು ಎಲ್ಲಿ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. ಸದ್ಯಕ್ಕೆ ಕಾರ್ಯಕರ್ತರಿಗೆ ಬೇಡ, ಲೋಕಸಭೆ ದೃಷ್ಟಿಯಿಂದ ಶಾಸಕರಿಗಷ್ಟೆ ಮಾಡೋಣ ಎಂದು ಸಿದ್ದರಾಮಯ್ಯ ವಾದ ಮುಂದಿಟ್ಟಿದ್ದರು. ಇದನ್ನೂ ಓದಿ: ಮೈತ್ರಿ ಬಳಿಕ ಮೊದಲ ಬಾರಿಗೆ ಮೋದಿಯನ್ನು ಭೇಟಿಯಾದ ದಳಪತಿಗಳು
ಶಾಸಕರಿಗೆ ಪಕ್ಷ ಟಿಕೆಟ್ ನೀಡಿದೆ. ಅವರನ್ನು ಪಕ್ಷ ಶಾಸಕರನ್ನಾಗಿ ಮಾಡಿದೆ. ಪಕ್ಷದ ಗೆಲುವಿಗೆ ಹಗಲಿರುಳು ದುಡಿದ ಕಾರ್ಯಕರ್ತರಿಗೆ ಅಧಿಕಾರ ಕೊಡದಿದ್ದರೆ ಅದು ಲೋಕಸಭೆ ಮೇಲೆ ಪರಿಣಾಮ ಬೀರಲ್ವಾ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದರು. ಇರುವ 50 ನಿಗಮ ಮಂಡಳಿಗೆ ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಯಾರನ್ನೆ ಮಾಡಿದರೂ ಉಳಿದವರಿಗೆ ಅಸಮಾಧಾನ ಆಗುತ್ತೆ ಎಂದು ಸಿದ್ದರಾಮಯ್ಯ ವಾದ ತಿಳಿಸಿದರು. ಕಾರ್ಯಕರ್ತರಿಗೆ ಅಧಿಕಾರ ಇಲ್ಲಾ ಅಂದರೆ ಶಾಸಕರಿಗೂ ಬೇಡ. ಶಾಸಕರಿಗಷ್ಟೆ ಅನುಮತಿ ಬೇಡ. ಕಾರ್ಯಕರ್ತರ ಪಟ್ಟಿ ಆದ ಮೇಲೆ ಒಟ್ಟಿಗೆ ಎಐಸಿಸಿ ಒಪ್ಪಿಗೆ ಕೊಡಲಿ ಎಂದು ಕಡ್ಡಿ ತುಂಡಾದಂತೆ ರಾಹುಲ್ ಗಾಂಧಿ ಹೇಳಿದರು.
ನಾನು ಅದನ್ನೇ ಹೇಳಿದ್ದೇನೆ. ಮೊದಲಿನಿಂದಲೂ ಎಂದು ಡಿಕೆಶಿ ಇದೇ ವೇಳೆ ಧ್ವನಿಗೂಡಿಸಿದರು. ಶಾಸಕರ ಈ ಪಟ್ಟಿ ಹೀಗೆ ಇರಲಿ. ಉಳಿದ ಸ್ಥಾನಗಳಿಗೆ ಕಾರ್ಯಕರ್ತರ ಪಟ್ಟಿ ತಂದು ಎಲ್ಲವನ್ನು ಕ್ಲಿಯರ್ ಮಾಡಿಸಿಕೊಳ್ಳಿ ಎಂದು ರಾಹುಲ್ ಸೂಚನೆ ನೀಡಿದರು. ಸಭೆಯೊಂದರಲ್ಲಿ ಇದ್ದ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ ಹಾಗೂ ಸುರ್ಜೆವಾಲಗೆ ಕಾರ್ಯಕರ್ತರ ಪಟ್ಟಿ ಬಂದ ಮೇಲೆ ಮುಂದುವರಿಯಿರಿ ಎಂದು ಸ್ಥಳದಲ್ಲೇ ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಫೈಟರ್ ರವಿ ನಿವಾಸದ ಮೇಲೆ ಐಟಿ ದಾಳಿ
ಸಂಜೆ ಮತ್ತೊಮ್ಮೆ ಖರ್ಗೆ ಮನವೊಲಿಕೆಗೆ ಸಿದ್ದರಾಮಯ್ಯ ಪ್ರಯತ್ನಿಸಿದರು. ಪಟ್ಟಿ ನಾನು ನೋಡಿಲ್ಲ ನೋಡಿದ ಮೇಲೆ ಮಾತನಾಡುತ್ತೇನೆ ಎಂದು ಖರ್ಗೆ ಹೇಳಿದರು. ಕಾರ್ಯಕರ್ತರಿಗೆ ನಿಗಮ-ಮಂಡಳಿ ಈಗ ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೀಗೆ ಗೊಂದಲ ಮುಂದುವರಿದರೆ ಲೋಕಸಭೆ ಚುನಾವಣೆ ವರೆಗೆ ಶಾಸಕರಿಗೆ ಹಾಗೂ ಕಾರ್ಯಕರ್ತರಿಗೆ ನಿಗಮ ಮಂಡಳಿ ಭಾಗ್ಯ ಡೌಟು ಎನ್ನಲಾಗುತ್ತಿದೆ.