– ಕೇಂದ್ರದಿಂದಲೂ 7 ವರ್ಷ ಶಿಕ್ಷೆಗೆ ಸುಗ್ರೀವಾಜ್ಞೆ
ಬೆಂಗಳೂರು: ನಗರದ ಪಾದರಾಯನಪುರ ಗಲಭೆ ಬೆನ್ನಲ್ಲೇ ಕೊರೊನಾ ವಾರಿಯರ್ಸ್ ಮೇಲಿನ ದಾಳಿ ತಡೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.
ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ತಕ್ಷಣದಿಂದಲೇ ಜಾರಿಗೆ ಬಂದಿದೆ. ಇನ್ಮೇಲೆ, ಸರ್ಕಾರಿ ಅಧಿಕಾರಿಗಳು, ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದರೆ ಅಂಥವರಿಗೆ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ಶಿಕ್ಷೆ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಕೂಡ 1897ರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ.
Advertisement
Advertisement
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದು, ಕೊರೋನಾ ವಾರಿಯರ್ಸ್ ಮೇಲೆ ನಡೆಯುತ್ತಿರುವ ಕೃತ್ಯಗಳು `ಸಹಿಸುವಂತ ಪ್ರಕರಣ’ಗಳೇ ಅಲ್ಲ ಅಂತ ಸ್ಪಷ್ಟಪಡಿಸಿದೆ. ಏಪ್ರಿಲ್ 27ರಂದು ಪ್ರಧಾನಿ ಮೋದಿ ಅವರು, ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಈ ನಡುವೆಯೂ ಇಂದು ಪಾದರಾಯನಪುರದ ಗಲಭೆಯಂತಹ ಘಟನೆ ಪಶ್ಚಿಮ ಬಂಗಾಳದ ಬದುರಿಯಾದಲ್ಲಿ ನಡೆದಿದೆ. ಲಾಕ್‍ಡೌನ್ ಕಾವಲಿಗೆ ಇದ್ದ ಪೊಲೀಸರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ.
Advertisement
ರಾಜ್ಯದ ಸುಗ್ರೀವಾಜ್ಞೆಯಲ್ಲಿ ಏನಿದೆ?
ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ್ರೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆಸ್ತಿ ನಷ್ಟ ಉಂಟುಮಾಡಿದರೆ ಆಸ್ತಿ ಮಟ್ಟುಗೋಲು ಹಾಕಲಾಗುತ್ತದೆ. ಆಸ್ತಿ ಇಲ್ಲದಿದ್ದರೆ ಆರೋಪಿಗಳು ಬಂಧನ, ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. ಜಿಲ್ಲಾ ದಂಡಾಧಿಕಾರಿಗಳಿಗೆ ಅಧಿಕಾರ ಚಲಾಯಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧನ ಮಾಡಬಹುದು. ಹಲ್ಲೆಗೊಳಗಾದ ಕೊರೊನಾ ವಾರಿಯರ್ಸ್ ದೂರು ದಾಖಲಿಸಬೇಕಿಲ್ಲ.
Advertisement
ಕೇಂದ್ರದ ಸುಗ್ರೀವಾಜ್ಞೆಯಲ್ಲಿ ಏನಿರುತ್ತೆ?
ಹೆಲ್ತ್ ವಾರಿಯರ್ಸ್ ಮೇಲಿನ ಹಲ್ಲೆಗೆ 6 ತಿಂಗಳಿಂದ 7 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ. 50 ಸಾವಿರ ರೂ.ದಿಂದ 5 ಲಕ್ಷ ರೂಪಾಯಿವರೆಗೂ ದಂಡ ವಿಧಿಸಲಾಗುವುದು. ವಾಹನಗಳು, ಆಸ್ಪತ್ರೆಗಳ ಮೇಲೆ ದಾಳಿ ನಡೆದು ಆಸ್ತಿ ನಷ್ಟ ಸಂಭವಿಸಿದರೆ ಅವುಗಳ ಮಾರುಕಟ್ಟೆ ಮೌಲ್ಯದ ದುಪ್ಪಟ್ಟು ದಂಡವನ್ನು ವಸೂಲಿ ಮಾಡಲಾಗುತ್ತದೆ. ಇಂತಹ ಪ್ರಕರಣವನ್ನು ಒಂದು ವರ್ಷದೊಳಗೆ ವಿಚಾರಣೆ ಮುಗಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಸಂಪೂರ್ಣ ಭದ್ರತೆ ನೀಡಲಾಗುತ್ತದೆ.