ಉಡುಪಿ: ಕೊರೊನಾ ಹಾಟ್ ಸ್ಪಾಟ್ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಉಡುಪಿ ಜಿಲ್ಲೆಯಿಂದ 16 ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ ಎಂಬ ಮಾಹಿತಿಯಿದೆ. ಉಡುಪಿ, ಕುಂದಾಪುರ- ಬೈಂದೂರು, ಕಾರ್ಕಳ, ಪಡುಬಿದ್ರೆ ವ್ಯಾಪ್ತಿಯ ಯುವಕರು ಮತ್ತು ಮಧ್ಯವಯಸ್ಕರು ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆಂಬ ಮಾಹಿತಿ ರಾಜ್ಯದಿಂದ ಜಿಲ್ಲೆಗೆ ರವಾನೆಯಾಗಿದೆ.
ಮಂಗಳವಾರ ರಾತ್ರಿ ಈ ಮಾಹಿತಿ ಬಂದಿದ್ದು, ಆಯಾ ಪೊಲೀಸ್ ಠಾಣೆಯ ಮೂಲಕ ಶಿಬಿರಾರ್ಥಿಗಳನ್ನು ಹಾಗೂ ಶಿಬಿರಾರ್ಥಿಗಳ ಸಂಪರ್ಕಕ್ಕೆ ಬಂದವರನ್ನು ಗುರುತಿಸುವ ಕೆಲಸ ನಡೆದಿದೆ. 16 ಮಂದಿಯನ್ನು ಕೂಡ ಸಂಪೂರ್ಣವಾಗಿ ಕ್ವಾರಂಟೈನ್ ಮಾಡಬೇಕು ಎಂದು ಕೇಂದ್ರದಿಂದ ಖಡಕ್ ಆದೇಶ ಪ್ರತಿ ಜಿಲ್ಲೆಗಳಿಗೆ ಬಂದಿದೆ. ಹೀಗಾಗಿ 16 ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆದರೆ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಈ ಮಾಹಿತಿಯನ್ನು ಅಲ್ಲಗಳೆದಿದ್ದಾರೆ. ದೆಹಲಿಯ ಜಮಾತ್ ಸಮಾವೇಶಕ್ಕೆ ಉಡುಪಿ ಜಿಲ್ಲೆಯಿಂದ ಯಾರೂ ಪಾಲ್ಗೊಂಡಿಲ್ಲ. ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಪ್ರವಾಸ ಮಾಡಿದವರೆಲ್ಲರ ಮಾಹಿತಿ ಸಿಕ್ಕಿದೆ. ನಿಜಾಮುದ್ದೀನ್‍ನಿಂದ ಬಂದವರ ಜೊತೆ ಪ್ರಯಾಣಿಸಿದ ಸಂದರ್ಭದಲ್ಲಿ ರೈಲು, ವಿಮಾನದಲ್ಲಿ ಓಡಾಡಿದವರ ತಪಾಸಣೆಗೆ ಆದೇಶಿಸಲಾಗಿದೆ. ರೈಲಿನಲ್ಲಿ ಸಂಚಾರ ಮಾಡಿದವರ ಮಾಹಿತಿಯ ಮೇರೆಗೆ ಹೈ ರಿಸ್ಕ್ ಪಟ್ಟಿ ಬಿಡುಗಡೆ ಮಾಡಿದ್ದು, ಅವರ ಮೇಲೂ ನಿಗಾ ಇಡಲಾಗಿದೆ ಎಂದರು.