ಶವ ತಂದ ನಂತ್ರ ಮುಂಬೈನಿಂದ ಬಂದ ಕೆ.ಆರ್.ಪೇಟೆಯ ಗರ್ಭಿಣಿಗೂ ಕೊರೊನಾ

Public TV
2 Min Read
MND 3

– ಸಕ್ಕರೆನಾಡಿಗೆ ಮುಳುವಾಗುತ್ತಿದೆ ಮಹಾರಾಷ್ಟ್ರ

ಮಂಡ್ಯ: ದಿನೇ ದಿನೇ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈಗ ಮಂಡ್ಯಕ್ಕೆ ಮುಂಬೈ ಲಿಂಕ್ ಹೆಚ್ಚಾಗಿದ್ದು, ಶವ ತಂದ ಬಳಿಕ ಇದೀಗ ಮುಂಬೈನಿಂದ ಗರ್ಭಿಣಿಯೊಬ್ಬರು ಬಂದಿದ್ದು, ಅವರಿಗೂ ಕೊರೊನಾ ದೃಢವಾಗಿದೆ.

ಮಂಡ್ಯಕ್ಕೆ ಮುಂಬೈಯ ಕೊರೊನಾ ಚೈನ್ ಲಿಂಕ್ ಹೆಚ್ಚಾಗುತ್ತಿದೆ. ಮುಂಬೈನಿಂದ ಮಂಡ್ಯಕ್ಕೆ ಶವ ತಂದು ಅಂತ್ಯಕ್ರಿಯೆ ನಡೆಸಿದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅಂಬುಲೆನ್ಸ್‌ನಲ್ಲಿ ಶವ ತಂದ ದಿನವೇ ಗರ್ಭಿಣಿಯೊಬ್ಬರನ್ನ ಮುಂಬೈನಿಂದ ಮಂಡ್ಯದ ಕೆ.ಆರ್.ಪೇಟೆಗೆ ಕರೆತರಲಾಗಿತ್ತು. ಇದೀಗ ಆ ಗರ್ಭಿಣಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಸಕ್ಕರೆನಾಡನ್ನು ಮತ್ತಷ್ಟು ಭಯಬೀಳಿಸಿದೆ.

MND 1

ಮುಂಬೈನಿಂದ ಬಂದ ಗರ್ಭಿಣಿ ಮೂಲತಃ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಜಾಗಿನಕೆರೆ ಗ್ರಾಮದವರು. ಕಳೆದ ಮೂರ್ನಾಲ್ಕು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದ ಈ ಗರ್ಭಿಣಿ ಮತ್ತು ಕುಟುಂಬ ಏಪ್ರಿಲ್ 23ರಂದು ಮುಂಬೈನಿಂದ ಹೊರಟು, ಏಪ್ರಿಲ್ 24ರ ಮಧ್ಯಾಹ್ನ ತಮ್ಮ ಸ್ವಂತ ಊರಿಗೆ ಆಗಮಿಸಿದ್ದಾರೆ. ಅಂಬುಲೆನ್ಸ್‌ನಲ್ಲಿ ವ್ಯಕ್ತಿಯ ಶವ ತಂದ ದಿನವೇ ಈ ಗರ್ಭಿಣಿ ಕೂಡ ಮಂಡ್ಯಕ್ಕೆ ಆಗಮಿಸಿದ್ದಾರೆ.

ಮೃತ ಆಟೋ ಚಾಲಕ ಮತ್ತು ಗರ್ಭಿಣಿ ಇಬ್ಬರೂ ಒಂದೇ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದರು. ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಾದ ಹಿನ್ನೆಲೆಯಲ್ಲಿ ಗರ್ಭಿಣಿ ಕೂಡ ಕುಟುಂಬದ ಜೊತೆ ಶವ ಸಾಗಿಸುತ್ತಿದ್ದ ಅಂಬುಲೆನ್ಸ್ ಹಿಂಬಾಲಿಸಿ ಊರಿಗೆ ಬಂದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

MND 2

ಗರ್ಭಿಣಿ ಮತ್ತು ಆಕೆಯ ಜೊತೆ ಇದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್ ಬಂದಿರೋದನ್ನ ಮಂಡ್ಯ ಡಿಸಿ ಸ್ಪಷ್ಟಪಡಿಸಿದ್ದಾರೆ. ಏಳು ತಿಂಗಳ ಗರ್ಭಿಣಿ ಸೇರಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಇವರು ಮುಂಬೈನಲ್ಲಿ ವಾಸ ಇದ್ದವರು. ಏ.23ರ ಸಂಜೆ 7.30ಕ್ಕೆ ಮುಂಬೈನಿಂದ ಹೊರಟು, ಏ.23ರ ಮಧ್ಯಾಹ್ನ 3 ಗಂಟೆಗೆ ತಮ್ಮೂರಿಗೆ ಬಂದಿದ್ದಾರೆ. ಗರ್ಭಿಣಿ ಜೊತೆಗೆ ಪತಿ, ಮಾವ, ಅತ್ತೆ ಮತ್ತು ಮಕ್ಕಳೊಂದಿಗೆ ಆಗಮಿಸಿದ್ದಾರೆ. ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ, ಕಡೂರು, ಅರಸೀಕೆರೆ, ಚನ್ನರಾಯಪಟ್ಟಣ, ಶ್ರವಣಬೆಳಗೊಳ ಚೆಕ್‍ಪೋಸ್ಟ್ ಮೂಲಕ ಆಗಮಿಸಿರುವ ಇವರು, ತಮ್ಮನ್ನು ತಡೆದ ಚೆಕ್ ಪೋಸ್ಟ್ ಗಳಲ್ಲಿ ಗರ್ಭಿಣಿಯ ತಾಯಿ ಕಾರ್ಡ್ ತೋರಿಸಿ ಬಂದಿದ್ದಾರೆ ಎಂದು ಡಿಸಿ ಡಾ.ಎಂ.ವಿ.ವೆಂಕಟೇಶ್ ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *