ಬಾಗಲಕೋಟೆ: ಕೊರೊನಾ ಸೋಂಕಿನಿಂದ ಗುಣಮುಖನಾದರೂ ಪೊಲೀಸ್ ಪೇದೆ ಮಗನಿಗಾಗಿ ಕೋವಿಡ್ ಆಸ್ಪತ್ರೆಯಲ್ಲೇ ಕಾಯುತ್ತಿದ್ದಾರೆ.
ರೋಗಿ ಸಂಖ್ಯೆ 380 ಮುದೋಳ ಠಾಣೆ ತನಿಖಾ ಸಹಾಯಕ ಪೇದೆಯ ವರದಿ ಎರಡನೇ ಬಾರಿ ನೆಗೆಟಿವ್ ಬಂದಿದೆ. ಆದರೂ ತಮ್ಮ ಮಗ ರೋಗಿ ಸಂಖ್ಯೆ 468 ಗಾಗಿ ಆಸ್ಪತ್ರೆಯಲ್ಲೇ ಕಾಯುತ್ತಿದ್ದಾರೆ. ಮಗನ ಎರಡನೇ ವರದಿ ಬರುವುದು ಬಾಕಿ ಇದೆ. ಹೀಗಾಗಿ ಗುಣಮುಖವಾದರೂ ಮಗನಿಗೋಸ್ಕರ ಕೋವಿಡ್ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದಾರೆ.
ಅಲ್ಲದೆ ಇಂದು ತನಿಖಾ ಸಹಾಯಕ ಪೇದೆಯ 44ನೇ ವರ್ಷದ ಜನ್ಮ ದಿನವಾಗಿದ್ದು, ಆದರೂ ಮನೆಗೆ ತೆರಳಿಲ್ಲ. ದೂರವಾಣಿ ಮೂಲಕ ಸ್ನೇಹಿತರು, ಸಂಬಂಧಿಕರು ಶುಭ ಕೋರುತ್ತಿದ್ದಾರೆ. ಅಲ್ಲದೆ ಈ ಹಿಂದೆ ಪೇದೆ ಹಾಡಿದ ಕೊರೊನಾ ಜಾಗೃತಿ ಗೀತೆಯ ವಿಡಿಯೋ ವೈರಲ್ ಆಗಿದ್ದು, ಎಪ್ರಿಲ್ 2ರಂದು ಪೇದೆ ಕೊರೊನಾ ಜಾಗೃತಿ ಗೀತೆ ಹಾಡಿದ್ದರು.
ಎಪ್ರಿಲ್ 18 ರಂದು ರೋಗಿ ಸಂಖ್ಯೆ 263 ಸಂಪರ್ಕದ ಹಿನ್ನೆಲೆ ಪೇದೆಗೆ ಸೋಂಕು ತಗುಲಿತ್ತು. ನಂತರ ಎಪ್ರಿಲ್ 24 ರಂದು 14 ವರ್ಷದ ಮಗನಲ್ಲಿ ಸೋಂಕು ಪತ್ತೆಯಾಗಿತ್ತು. ತಂದೆ ಮಗ ಇಬ್ಬರೂ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಪೇದೆಯ ವರದಿ ನೆಗೆಟಿವ್ ಬಂದಿದ್ದು, ಆದರೂ ಮಗನಿಗಾಗಿ ಕಾಯುತ್ತಿದ್ದಾರೆ.