– ಈಗ ಸಾತೇನಹಳ್ಳಿ ಗ್ರಾಮ ಸೀಲ್‍ಡೌನ್
ಮಂಡ್ಯ: ದಿನೇ ದಿನೇ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇವತ್ತು 8 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 511ಕ್ಕೆ ಏರಿದೆ. ಇಂದು ಜಿಲ್ಲೆಯ ನಾಗಮಂಗಲದ 50 ವರ್ಷದ ಪುರುಷನಿಗೆ ಕೊರೊನಾ ದೃಢಪಟ್ಟಿದ್ದು, ಆತನ ಟ್ರಾವೆಲ್ ಹಿಸ್ಟರಿಂದ ಮಂಡ್ಯ ಜನತೆ ಆತಂಕಗೊಂಡಿದ್ದಾರೆ.
ಮುಂಬೈನಿಂದ ಬಂದ ನಾಗಮಂಗಲ ಮೂಲದ ವ್ಯಕ್ತಿಗೆ ಸೋಂಕು ದೃಢವಾಗಿದೆ. ನಾಗಮಂಗಲ ತಾಲೂಕಿನ ಸಾತೇನಹಳ್ಳಿ ಗ್ರಾಮದ 50 ವರ್ಷದ ವ್ಯಕ್ತಿಗೆ (ರೋಗಿ 505) ಸೋಂಕು ಬಂದಿದೆ. ಈ ವ್ಯಕ್ತಿ ಮುಂಬೈನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಆದರೆ ಲಾಕ್‍ಡೌನ್ ಇದ್ದರೂ ಅಧಿಕಾರಿಗಳ ಕಣ್ಣು ತಪ್ಪಿಸಿ ಏಪ್ರಿಲ್ 22ಕ್ಕೆ ಗ್ರಾಮಕ್ಕೆ ಆಗಮಿಸಿದ್ದಾರೆ.
Advertisement
Advertisement
ಕೊರೊನಾ ಸೋಂಕಿತ ಅಗತ್ಯ ಸೇವೆಗಳ ಟ್ರಕ್, ಬೈಕ್ ಸಹಾಯ ಪಡೆದು ಮುಂಬೈನಿಂದ ಸಾತೇನಹಳ್ಳಿಗೆ ಬಂದಿದ್ದಾರೆ. ಇತ್ತ ಮುಂಬೈನಿಂದ ವ್ಯಕ್ತಿ ಬರುತ್ತಿದ್ದಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ತಕ್ಷಣ ಏಪ್ರಿಲ್ 24ರಂದು ವ್ಯಕ್ತಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಬಂದ ರಿಪೋರ್ಟ್ ನಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಪಾಸಿಟಿವ್ ಬರುತ್ತಿದ್ದಂತೆ ಸಾತೇನಹಳ್ಳಿಯನ್ನು ಸೀಲ್‍ಡೌನ್ ಮಾಡಲಾಗಿದೆ.
Advertisement
ಸೋಂಕಿತ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡಿಗೆ ಶಿಫ್ಟ್ ಮಾಡಲಾಗಿದೆ. ಈಗಾಗಲೇ ಅಧಿಕಾರಿಗಳು ಕುಟುಂಬಸ್ಥರನ್ನು ಕ್ವಾರೆಂಟೈನ್ ಮಾಡಿದ್ದಾರೆ. ಇದು ನಾಗಮಂಗಲದ ಮೊದಲ ಪಾಸಿಟಿವ್ ಪ್ರಕರಣ ಆಗಿದೆ. ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17ಕ್ಕೇರಿದೆ. ಮಳವಳ್ಳಿ (ತಬ್ಲಿಘಿಗಳು) -14, ಮಂಡ್ಯ ನಗರ (ಜುಬಿಲಿಯಂಟ್) -2 ಮತ್ತು ನಾಗಮಂಗಲ (ಮುಂಬೈ ಮೂಲ)- ಓರ್ವನಿಗೆ ಸೋಂಕು ಬಂದಿದೆ.