ಚಾಮರಾಜನಗರ: ಲಾಕ್‍ಡೌನ್ ಇದ್ದರೂ ಜನರು ಔಷಧಿ ಖರೀದಿ ನೆಪದಲ್ಲಿ ಮನೆಯಿಂದ ಹೊರಬರುತ್ತಿದ್ದಾರೆ. ಇದರಿಂದ ವಾಹನ ಸಂಚಾರ, ಜನದಟ್ಟಣೆಯು ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ ಮೆಡಿಕಲ್ ಶಾಪ್‍ಗಳ ಮುಂದೆ ಜನ ಗುಂಪುಗುಂಪಾಗಿ ಸೇರುತ್ತಿದ್ದಾರೆ. ಇದನ್ನು ತಡೆಗಟ್ಟಲು ಚಾಮರಾಜನಗರ ಜಿಲ್ಲಾಡಳಿತ ‘ಔಷಧಿ ಮಿತ್ರ’ ಎಂಬ ವಿನೂತನ ಸೇವೆ ಆರಂಭಿಸಿದೆ.
ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಹಾಗೂ ಹನೂರು ಪಟ್ಟಣಗಳಲ್ಲಿ ಮನೆಮನೆಗೆ ಔಷಧಿ ತಲುಪಿಸಲು ಜಿಲ್ಲಾಡಳಿತದ ವತಿಯಿಂದ ಫಾರ್ಮಸಿಸ್ಟ್‌ಗಳನ್ನು ನಿಯೋಜಿಸಲಾಗಿದೆ. ಇವರಿಗೆ ಜಿಲ್ಲಾಡಳಿತದಿಂದಲೇ ಬೈಕ್ ನೀಡಲಾಗಿದ್ದು, ಔಷಧಿಯ ವಿವರಗಳನ್ನು ಡಾಕ್ಟರ್ ನೀಡಿರುವ ಔಷಧಿ ಚೀಟಿ ಸಮೇತ ಇವರಿಗೆ ವಾಟ್ಸಪ್ ಮಾಡಿದರೆ ಸಾಕು. ಈ ಫಾರ್ಮಸಿಸ್ಟ್‌ಗಳು ಮೆಡಿಕಲ್ ಶಾಪ್‍ಗೆ ಹೋಗಿ ವಾಟ್ಸಪ್‍ನಲ್ಲಿ ನೀವು ತಿಳಿಸಿರುವ ಔಷಧಿಗಳನ್ನು ತಂದು ಮನೆ ಬಾಗಿಲಿಗೆ ರಶೀದಿ ಸಮೇತ ತಲುಪಿಸಲಿದ್ದಾರೆ.
ಔಷಧಿ ತಲುಪಿದ ಮೇಲೆ ಔಷಧಿಗೆ ನಿಗದಿಯಾಗಿರುವ ಹಣ ನೀಡಿದರೆ ಸಾಕು ಯಾವುದೇ ಸರ್ವೀಸ್ ಚಾರ್ಜ್ ಅಥವಾ ಡೆಲಿವರಿ ಚಾರ್ಜ್ ನೀಡಬೇಕಾಗಿಲ್ಲ. ಸದ್ಯದ ಮಟ್ಟಿಗೆ ಚಾಮರಾಜನಗರ ಕೊರೊನಾ ಮುಕ್ತವಾಗಿದೆ. ಆದರೆ ಮೈಸೂರು, ಮಂಡ್ಯ, ಕೇರಳ ತಮಿಳುನಾಡು ಹೀಗೆ ಹಾಟ್‍ಸ್ಪಾಟ್‍ಗಳಿಂದಲೇ ಸುತ್ತುವರಿದಿರುವುದು ಆತಂಕಕ್ಕೆ ಕಾರಣವಾಗಿದೆ.
ಜನರ ಅನಗತ್ಯ ಓಡಾಟ, ಗುಂಪು ಸೇರುವಿಕೆಯಿಂದ ಅಪಾಯ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ಚಾಮರಾಜನಗರ ಜಿಲ್ಲೆಗೆ ಕೊರೊನಾ ಸೋಂಕು ತಗುಲಬಾರದು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದು, ಇದರ ಒಂದು ಭಾಗವಾಗಿ ಔಷಧಿ ಮಿತ್ರ ಯೋಜನೆ ಜಾರಿಗೆ ತಂದಿದ್ದಾರೆ.