ಮಂಗಳೂರು: ಕೊರೊನಾ ವೈರಸ್ ಭೀತಿಯಿಂದ ದೇಶವೇ ಲಾಕ್‍ಡೌನ್ ಆಗಿದೆ. ಕೊರೊನಾ ಆತಂಕದಿಂದ, ಜನ ಮನೆ ಬಿಟ್ಟು ಹೊರಗೆ ಬರುವುದು ಕಡಿಮೆಯಾಗಿದ್ದು, ಇದೇ ಸಮಯದಲ್ಲಿ ಕಳ್ಳರು ಅಂಗಡಿ, ಕಟ್ಟಡಗಳಿಗೆ ನುಗ್ಗಿ ಹಣ ದೋಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜನಲ್ಲಿ ನಡೆದಿದೆ.
ರಾಮಕುಂಜ ಪರಿಸರದ ಅಂಗಡಿಗಳಿಗೆ ಬುಧವಾರ ರಾತ್ರಿ ನುಗ್ಗಿದ ಕಳ್ಳರು ಹಣ ದೋಚಿದ್ದಾರೆ. ಅಷ್ಟೇ ಅಲ್ಲದೆ ರಾಮಕುಂಜ ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಇಂಟರ್‍ನೆಟ್‍ನ ಮೋಡೆಮ್ ಎಗರಿಸಿದ್ದು, ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಡ್ರಾಯರ್ ತೆರೆದು ಹಣಕ್ಕಾಗಿ ಹುಡುಕಾಟ ನಡೆದಿದ್ದಾರೆ. ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿರುವ ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿನ ಎಸ್‍ಬಿಐನ ಗ್ರಾಹಕ ಸೇವಾ ಕೇಂದ್ರಕ್ಕೂ ನುಗ್ಗಿದ್ದು ಇಲ್ಲಿಂದ ನಗದು ದೋಚಿದ್ದಾರೆ.
Advertisement
Advertisement
ಮೊಬೈಲ್ ಅಂಗಡಿಗೂ ನುಗ್ಗಿದ ಕಳ್ಳರು ಡಿವಿಆರ್ ಕಳವುಗೈದಿದ್ದು ಡ್ರಾಯರ್ ಲಾಕ್ ತೆಗೆದು ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಮಾತ್ರವಲ್ಲದೆ ರಾಮಕುಂಜ ಪ.ಪೂ.ಕಾಲೇಜಿನ ಕಚೇರಿಗೂ ನುಗ್ಗಿದ್ದು ಇಲ್ಲಿಂದ ಹಣ ದೋಚಿ ತಪ್ಪಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನದಳ, ಬೆರಳಚ್ಚು ತಜ್ಞರನ್ನು ಪರಿಶೀಲನೆ ನಡೆಸಿ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.