– ಪಬ್ಲಿಕ್ ಹೀರೋ ವಿಶು ಶೆಟ್ಟಿ ಮುತುವರ್ಜಿ
ಉಡುಪಿ: ದೇಶಕ್ಕೆ ವಕ್ಕರಿಸಿರುವ ಮಹಾಮಾರಿ ಕೊರೊನಾದಿಂದ ಮುಕ್ತಿಗಾಗಿ ಉಡುಪಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಜಿಲ್ಲೆಯ ಸಿಟಿ ಬಸ್ ನಿಲ್ದಾಣದಿಂದ ಸುಮಾರು 300ಕ್ಕೂ ಹೆಚ್ಚು ಮಂದಿ ನಿರಾಶ್ರಿತರು ಮತ್ತು ನಿರ್ಗತಿಕರು ಈ ಪ್ರಾರ್ಥನೆ ಸಲ್ಲಿಸಿದರು.
ಪಬ್ಲಿಕ್ ಹೀರೋ, ಸಮಾಜ ಸೇವಕ ವಿಶು ಶೆಟ್ಟಿ ಇವರಿಗೆಲ್ಲಾ ಕಳೆದ 25 ದಿನದಿಂದ ಮೂರು ಹೊತ್ತು ಆಹಾರ ಕೊಡುತ್ತಿದ್ದಾರೆ. ಇವತ್ತು ಸೌರಮಾನ ಯುಗಾದಿ ಆಗಿರುವುದರಿಂದ ಕೊರೊನಾ ವೈರಸ್ ಆತಂಕ ದೂರ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು. ಕೈಮುಗಿದು ಅಂತರ ಕಾಯ್ದುಕೊಂಡು ನಿಂತ ಜನ ದೇವರಲ್ಲಿ ಕೆಲಕಾಲ ಕಷ್ಟ ದೂರ ಮಾಡಪ್ಪಾ ಅಂತ ಪ್ರಾರ್ಥನೆ ಮಾಡಿದರು.
ಬೇರೆ ಬೇರೆ ಊರಿನಿಂದ ಬಂದು ಉಡುಪಿಯಲ್ಲಿ ಸಿಕ್ಕಿಹಾಕಿಕೊಂಡಿರುವ, ಉಡುಪಿಗೆ ದಿನಗೂಲಿಗಾಗಿ ಬಂದಿರುವ ಜನಕ್ಕೆ ವಿಶು ಶೆಟ್ಟಿ ಬೆಳಗ್ಗೆ ಚಹಾ, ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ ಕೊಡುತ್ತಿದ್ದಾರೆ. ಅಲ್ಲದೇ ಕಡು ಬಡ ಕುಟುಂಬಕ್ಕೆ ದಿನಸಿಯನ್ನೂ ಪೂರೈಸುತ್ತಿದ್ದಾರೆ. ಸಾಮೂಹಿಕ ಪ್ರಾರ್ಥನೆ ನಂತರ ಎಂದಿನಂತೆ ಚಹಾ ತಿಂಡಿ ವಿತರಿಸಲಾಯಿತು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿಶು ಶೆಟ್ಟಿ, ಕಷ್ಟದಲ್ಲಿ ಇರುವವರಿಗೆ ನಾನು ಎರಡೂವರೆ ದಶಕದಿಂದ ಜನಸೇವೆಯಲ್ಲಿ ತೊಡಗಿದ್ದೇನೆ. ಆದರೆ ಕೋವಿಡ್ 19 ಎಮರ್ಜೆನ್ಸಿ ಸಂದರ್ಭದಲ್ಲಿ ನಾನು ಬಹಳ ಪಾಠ ಕಲಿತಿದ್ದೇನೆ. ಹಸಿದವರ ಹೊಟ್ಟೆಗೆ ತುತ್ತು ಅನ್ನ ಬಡಿಸುವುದರಲ್ಲಿರುವ ಖುಷಿ ಬೇರೆ ಯಾವುದರಲ್ಲೂ ಸಿಗುವುದಿಲ್ಲ. ದೇಶಾದ್ಯಂತ ದೇವಸ್ಥಾನಗಳಲ್ಲಿ ಸಾರ್ವಜನಿಕ ಪೂಜೆ ನಿಂತಿದೆ. ನಾವು ಬಸ್ ನಿಲ್ದಾಣದಲ್ಲಿ ದೇವರಲ್ಲಿ ಸೌರಮಾನ ಯುಗಾದಿ ಸಂದರ್ಭ ಪ್ರಾರ್ಥನೆ ಮಾಡಿದ್ದೇವೆ. ಜನರ ಕಷ್ಟ ದೂರವಾಗಲಿ. ತಮ್ಮ ತಮ್ಮ ಮನೆಗೆ ಜನ ಸೇರುವಂತಾಗಲಿ ಎಂದರು.