Connect with us

Corona

ಐಸೋಲೇಷನ್ ವಾರ್ಡಿನಲ್ಲಿದ್ದ ರೋಗಿಯ ಮೇಲೆ ಸತತ 2 ರಾತ್ರಿ ಅತ್ಯಾಚಾರ – ಸಂತ್ರಸ್ತೆ ಸಾವು

Published

on

– ತೀವ್ರ ರಕ್ತಸ್ರಾವದಿಂದ ಮಹಿಳೆ ಸಾವು

ಪಟ್ನಾ: ಒಂದುಕಡೆ ದೇಶಾದ್ಯಂತ ಕೊರೊನಾ ವೈರಸ್ ಸೋಂಕಿತರನ್ನು ಗುಣಪಡಿಸುವಲ್ಲಿ ವೈದ್ಯಕೀಯ ಇಲಾಖೆ ಹಗಲಿರುಳು ಎನ್ನದೇ ಸೇವೆ ಮಾಡುತ್ತಿದ್ದಾರೆ. ಆದರೆ ಬಿಹಾರದಲ್ಲಿ ವೈದ್ಯರು ಐಸೋಲೇಷನ್ ವಾರ್ಡಿನಲ್ಲಿದ್ದ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬಿಹಾರದ ಗಯಾದಲ್ಲಿ ಈ ಘಟನೆ ನಡೆದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ ನಂತರ ಸಂತ್ರಸ್ತೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಅನುಗ್ರಹ ನಾರಾಯಣ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೃತ ಸಂತ್ರಸ್ತೆಯ ಅತ್ತೆ ಅಧಿಕಾರಿಗಳಿಗೆ ದೂರು ನೀಡಿದ ಬಳಿಕ ಮಂಗಳವಾರ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?
ಕೊರೊನಾದಿಂದ ಇಡೀ ದೇಶವೇ 21 ದಿನ ಲಾಕ್‍ಡೌನ್ ಆಗಿದೆ. 25 ವರ್ಷದ ಸಂತ್ರಸ್ತೆ ಪಂಜಾಬ್‍ನ ಲೂಧಿಯಾನದಿಂದ ಬಿಹಾರದ ಗಯಾಕ್ಕೆ ಮಾರ್ಚ್ 25ರಂದು ಪತಿಯೊಂದಿಗೆ ಬಂದಿದ್ದರು. ಮೃತ ಸಂತ್ರಸ್ತೆ ಎರಡು ತಿಂಗಳ ಗರ್ಭಿಣಿಯಾಗಿದ್ದು, ಆಕೆಗೆ ಗರ್ಭಪಾತವಾಗಿತ್ತು. ಗರ್ಭಪಾತದ ಕಾರಣದಿಂದಾಗಿ ಸಂತ್ರಸ್ತೆಗೆ ಹೆಚ್ಚು ರಕ್ತಸ್ರಾವವಾಗುತ್ತಿತ್ತು. ಹೀಗಾಗಿ ಆಕೆಯನ್ನು ಗಯಾದ ಮಾರ್ಚ್ 27ರಂದು ಅನುಗ್ರಹ ನಾರಾಯಣ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿ ಸಂತ್ರಸ್ತೆಯನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಬಳಿಕ ಏಪ್ರಿಲ್ 1 ರಂದು ಕೊರೊನಾ ವೈರಸ್ ಶಂಕೆ ಇದೆ ಎಂದು ಸಂತ್ರಸ್ತೆಯನ್ನು ಪ್ರತ್ಯೇಕ ವಾರ್ಡಿನಲ್ಲಿ ಇರಿಸಲಾಗಿತ್ತು. ಪ್ರತ್ಯೇಕ ವಾರ್ಡಿನಲ್ಲಿ ಸಂತ್ರಸ್ತೆ ಒಬ್ಬಂಟಿಯಾಗಿದ್ದಳು. ಇದೇ ವೇಳೆ ತಪಾಸಣೆ ಮಾಡಲು ಬರುತ್ತಿದ್ದ ವೈದ್ಯರು ಏಪ್ರಿಲ್ 2 ಮತ್ತು 3ರಂದು ಸತತ ಎರಡು ರಾತ್ರಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬದವರು ಆರೋಪಿಸಿದ್ದಾರೆ.

ಕೊರೊನಾ ಸೋಂಕು ಇಲ್ಲದಿರುವುದು ದೃಢಪಟ್ಟ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿತ್ತು. ಆದರೆ ಆಕೆ ಮನೆಯಲ್ಲಿ ಒಬ್ಬಳೇ ಮೌನವಾಗಿ ಇರುತ್ತಿದ್ದು, ಭಯಪಡುತ್ತಿದ್ದಳು. ಆಗ ಮನೆಯವರು ಪದೇ ಪದೇ ಕೇಳಿದಾಗ ಆಸ್ಪತ್ರೆಯಲ್ಲಿ ವೈದ್ಯರು ಅತ್ಯಾಚಾರ ಎಸಗಿರುವ ವಿಚಾರವನ್ನು ಹೇಳಿದ್ದಾಳೆ. ಆದರೆ ಚಿಕಿತ್ಸೆ ಪಡೆದರೂ ರಕ್ತಸ್ರಾವ ನಿಂತಿರಲಿಲ್ಲ. ಕೊನೆಗೆ ತೀವ್ರ ರಕ್ತಸ್ರಾವದಿಂದ ಏಪ್ರಿಲ್ 6 ರಂದು ಸೊಸೆ ಮೃತಪಟ್ಟಳು ಎಂದು ಅತ್ತೆ ತಿಳಿಸಿದ್ದಾರೆ.

ಸಂತ್ರಸ್ತೆಯ ಅತ್ತೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸ್ಪತ್ರೆಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಆದರೆ ಸಂತ್ರಸ್ತೆಯ ಅತ್ತೆಗೆ ಆರೋಪಿಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ಸದ್ಯಕ್ಕೆ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ, ಆರೋಪಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಸ್ಪತ್ರೆಯ ಅಧೀಕ್ಷಕ ಡಾ.ವಿ.ಕೆ.ಪ್ರಸಾದ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರಂತೆ ನಟಿಸಿ ಆಸ್ಪತ್ರೆಯ ಪ್ರತ್ಯೇಕವಾದ ವಾರ್ಡಿಗೆ ಹೋಗಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Click to comment

Leave a Reply

Your email address will not be published. Required fields are marked *