ಕೊರೊನಾ ಭೀತಿ – ಅಪರಾಧ ಪ್ರಕರಣಗಳೂ ಲಾಕ್‍ಡೌನ್

Public TV
1 Min Read
HBL 6

– ಆಸ್ಪತ್ರೆಯಲ್ಲೂ ಅಂತರ ಕಾಯ್ದುಕೊಂಡ ಜನರು

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂ ಹಾಗೂ ಲಾಕ್‍ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಸಿಬ್ಬಂದಿಗೆ ಫುಲ್ ನೆಮ್ಮದಿ ನೀಡಿದಂತಾಗಿದೆ. ಅಂದರೆ ಬಿಡುವಿಲ್ಲದೇ ಕೆಲಸ ನಿರ್ವಹಿಸುತ್ತಿರುವ ಪೊಲೀಸರಿಗೂ ಲಾಕ್‍ಡೌನ್‍ನಿಂದ ಯಾವ ಪೊಲೀಸ್ ಠಾಣೆಯಲ್ಲಿಯೂ ದೊಡ್ಡ ಪ್ರಮಾಣದ ಕ್ರೈಂ ಪ್ರಕರಣಗಳು ಪತ್ತೆಯಾಗಿಲ್ಲ.

ಪ್ರತಿನಿತ್ಯ ಮುಂಜಾನೆಯಿಂದ ಸಂಜೆಯವರೆಗೂ ಪೊಲೀಸ್ ಠಾಣೆಗಳಿಗೆ ಬರುತ್ತಿದ್ದ ಗಂಡ-ಹೆಂಡತಿ ಜಗಳ, ಅತ್ತೆ-ಮಾವ ಸೊಸೆಯರ ಗಲಾಟೆ, ಕಿರುಕುಳ ಪ್ರಕರಣ, ಆಸ್ತಿ ವಿವಾದ, ವೈಯಕ್ತಿಕ ಕಲಹ, ಮೋಸ, ವಂಚನೆ ಸೇರಿದಂತೆ ಹಲವು ರೀತಿಯ ಪ್ರಕರಣಗಳು ದಾಖಲಾಗಿಲ್ಲ. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂ ದಿನದಂದು ಮಹಿಳಾ ಠಾಣೆಗೆ ಒಂದೇ ಒಂದು ದೂರ ಬಾರದಿರುವುದು ವಿಶೇಷವಾಗಿದೆ.

1c979635 ca62 44f7 b0a4 51164176a702

ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಪೊಲೀಸರು ಆರೋಪಿಗಳ ಹುಡುಕಾಟ. ಕೋರ್ಟ್ ಗಳಿಗೆ ಅಲೆದಾಟ, ವಿಚಾರಣೆ, ತನಿಖೆ ಅಂತ ಕರ್ತವ್ಯ ಪಾಲನೆ ಮಾಡುತ್ತಿದ್ದರು. ಆದರೆ ಇದೀಗ ಕರ್ಫ್ಯೂ ಜಾರಿಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಸ್ವಲ್ಪ ಮಟ್ಟಿಗೆ ರಿಲಾಕ್ಸ್ ಮೂಡನಲ್ಲಿಯೇ ಜನರು ಗುಂಪುಗೂಡದಂತೆ ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ಕೊರೊನಾ ವೈರಸ್ ಸೊಂಕು ಹರಡದಂತೆ ತಡೆಗಟ್ಟಲು ಜನರಲ್ಲಿ ಜಾಗೃತಿ ಕಾರ್ಯಕ್ಕೆ ಮುಂದಾಗಿದ್ದಾರೆ.

a83b461d 3c48 40b2 9e3e d87384875dd0

ಇನ್ನೂ ಕಲಘಟಗಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಸೇರಿದಂತೆ ಯುವಕರ ಸಹಾಯದಿಂದ ಆಸ್ಪತ್ರೆ ಹಾಗೂ ಅಗತ್ಯ ವಸ್ತು ಖರೀದಿಸಲು ಸಾರ್ವಜನಿಕರಿಗೆ ಸಾಮಾಜಿಕ ಅಂತರವನ್ನು ಕಲ್ಪಿಸಲಾಯಿತು. ಆಸ್ಪತ್ರೆ, ಬ್ಯಾಂಕ್, ಎಟಿಎಂ, ಮೆಡಿಕಲ್ ಶಾಫ್, ತರಕಾರಿ ಖರೀದಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಾಕ್ಸ್ ಹಾಕಲಾಗಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಯಿತು.

ಅಲ್ಲದೆ ಕಲಘಟಗಿ ಪೊಲೀಸ್ ಠಾಣೆಯಿಂದ ಡಂಗುರ ಹೊಡೆಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಪಿಎಸ್‍ಐ ವಿಜಯ್ ಬಿರಾದಾರ ನೇತೃತ್ವದಲ್ಲಿ ಯುವಕರು, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ಕಾರ್ಯಗಳನ್ನ ಕೈಗೊಳ್ಳಲು ಜಾಗೃತಿ ಮೂಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *