ಜ್ಯೂಬಿಲಿಯೆಂಟ್ ಕಾರ್ಖಾನೆಯ ಮೊದಲ ಸೋಂಕಿತ ಡಿಸ್ಚಾರ್ಜ್ – ಆದ್ರೂ ಮನೆಗೆ ಹೋಗಲ್ಲ ಎಂದ

Public TV
2 Min Read
mys 3

ಮೈಸೂರು: ಕೊರೊನಾ ಹಾಟ್‍ಸ್ಪಾಟ್ ಮೈಸೂರಲ್ಲಿ ಶರವೇಗದಲ್ಲಿ ಹರಡುತ್ತಿದೆ. ಕಳೆದ ಒಂದೇ ದಿನ ಕೊರೊನಾ ಪಾಸಿಟಿವ್ ಸಂಖ್ಯೆ 42ಕ್ಕೆ ಏರಿಕೆ ಆಗಿದೆ. ಇನ್ನೆರಡು ದಿನದಲ್ಲಿ 50ರ ಗಡಿ ದಾಟುವ ಸಾಧ್ಯತೆ ಇದೆ. ಹೀಗಾಗಿ ಅರಮನೆ ನಗರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ಮೊದಲು ಕೊರೊನಾ ಕದಡಿದ್ದ ಕೇಸ್ ನಂ.52 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ.

ಮೈಸೂರಿನಲ್ಲಿ ಮತ್ತೆ ಐವರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಈ ಮೂಲಕ ಕೇವಲ ಮೈಸೂರಿನಲ್ಲಿಯೇ ಸೋಂಕಿತರ ಸಂಖ್ಯೆ 42ಕ್ಕೆ ಏರಿದೆ. 8 ವರ್ಷದ ಬಾಲಕನಿಗೂ ಸೋಂಕು ತಗುಲಿದೆ. ನಂಜನಗೂಡಿನ ಜ್ಯೂಬಿಲಿಯೆಂಟ್ ಕಾರ್ಖಾನೆ ನೌಕರರ ಸಂಪರ್ಕಿತ ವ್ಯಕ್ತಿಗಳಿಗೂ ಸೋಂಕು ದೃಢವಾಗಿದ್ದು, ಸೋಂಕಿತರ ಪುತ್ರ ಹಾಗೂ ಪತ್ನಿಗೂ ಸೋಂಕು ಹರಡಿದೆ. ಹೀಗಾಗಿ ಜ್ಯೂಬಿಲಿಯೆಂಟ್ ಕಾರ್ಖಾನೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಿದೆ.

mys a

ಈ ನಡುವೆ ಮೈಸೂರಿನಲ್ಲಿ ಎರಡನೇ ಕೊರೊನಾ ಪಾಸಿಟಿವ್ ಸೋಂಕಿತ ಡಿಸ್ವಾರ್ಜ್ ಆಗಿದ್ದಾನೆ. ಜ್ಯೂಬಿಲಿಯೆಂಟ್ ಕಾರ್ಖಾನೆಯ ಮೊದಲ ಸೋಂಕಿತನಾಗಿದ್ದ ರೋಗಿ ನಂ 52 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಜ್ಯೂಬಿಲಿಯಂಟ್ ಕಾರ್ಖಾನೆಯ ಹಲವು ನೌಕರರಿಗೆ ಸೋಂಕು ಹರಡಿಸಿದ್ದ ಕೇಸ್ ನಂ.52 ಮೈಸೂರಿನ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅಧಿಕೃತ ಮಾಹಿತಿ ಮಾಡಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೇಸ್ ನಂ.52 ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾನೆ. ಜಿಲ್ಲಾಡಳಿತ, ಆಸ್ಪತ್ರೆ ಸಿಬ್ಬಂದಿ ಹಾಗೂ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾನೆ.

mys dc 2

“ನನಗೆ 10 ದಿನಗಳ ಹಿಂದೆ ಜ್ವರ ಇತ್ತು. ಮೊದಲು ಸ್ಥಳೀಯ ಕ್ಲಿನಿಕ್‍ಗೆ ತೋರಿಸಿದ್ದೆ. ಮಾರ್ಚ್ 21ರಂದು ನಾನು ಗೋಪಾಲಗೌಡ ಆಸ್ಪತ್ರೆಗೆ ದಾಖಲಾಗಿದ್ದೆ. ನಂತರ ಮಾರ್ಚ್ 25ರಂದು ಕೆ.ಆರ್.ಆಸ್ಪತ್ರೆಗೆ ಕರೆತಂದರು. ನನಗೆ ಎಲ್ಲ ರೀತಿಯ ಪರೀಕ್ಷೆ ಮಾಡಿದರು. ಮಾರ್ಚ್ 30ರಂದು ನನ್ನನ್ನ ಕೋವಿಡ್-19 ಆಸ್ಪತ್ರೆಗೆ ಕಳುಹಿಸಿದರು. 14 ದಿನಗಳ ಕಾಲ ಚಿಕಿತ್ಸೆ ನೀಡಿ ನನ್ನನ್ನು ಗುಣಮುಖರನ್ನಾಗಿ ಮಾಡಿದ್ದಾರೆ. ಸೋಂಕು ಪೀಡಿತರನ್ನು ಸರ್ಕಾರ ಚೆನ್ನಾಗಿ ನೋಡಿಕೊಳ್ಳುತ್ತಿದೆ. ಎಲ್ಲರೂ ಸರ್ಕಾರಕ್ಕೆ ಸಹಕಾರ ನೀಡಿ. ಆದರೆ ನಾನು ಮಾತ್ರ ಈಗಲೇ ಮನೆಗೆ ಹೋಗಲ್ಲ, ನಾನು ಕ್ವಾರಂಟೈನ್‍ಗೆ ಒಳಗಾಗಿದ್ದೇನೆ” ಎಂದು ಪತ್ರದಲ್ಲಿ ಬರೆದಿದ್ದಾನೆ.

ಸೋಂಕು ಹರಡಿದ ವ್ಯಕ್ತಿ ಸೋಂಕಿನಿಂದ ಮುಕ್ತನಾದರೂ ಕೂಡ ಸೋಂಕಿತರ ಸಂಖ್ಯೆ ಮಾತ್ರ ನಿಲ್ಲುತ್ತಿಲ್ಲ. ಸೋಂಕಿತ ಕಾರ್ಮಿಕರ ಕುಟುಂಬದ ಒಳಗೆ ಈ ಚೈನ್ ಬೆಳೀತಿರೋದು ಆತಂಕ ಹೆಚ್ಚುವಂತೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *