ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಕಟ್ಟೆಚ್ಚರ ವಹಿಸಲಾಗಿದ್ದರೂ ಮಲ್ಪೆ ಬಂದರಿನಲ್ಲಿ ಇಂದು ಬೆಳಗ್ಗೆ ನಿರಂತರ ಜನಸಂದಣಿ ಕಂಡು ಬಂದಿತು. ಮುಂಜಾನೆ ವೇಳೆ ಬಂದರಿನಲ್ಲಿ ಸಾವಿರಾರು ಜನ ಸೇರಿದ್ದರು.
ಮೀನುಗಾರರು ಮತ್ತು ಮೀನುಗಾರ ಮಹಿಳೆಯರು ಮೀನು ಖರೀದಿ, ಮಾರಾಟದಲ್ಲಿ ತೊಡಗಿದ್ದರು. ಮೂರು ಸಾವಿರಕ್ಕೂ ಅಧಿಕ ಜನ ಮಲ್ಪೆ ಬಂದರಿನಲ್ಲಿ ಕಂಡುಬಂದರು. ಪ್ರತಿದಿನ ಮುಂಜಾನೆ ಕೆಲ ಗಂಟೆಗಳ ಮೀನು ವ್ಯಾಪಾರ ಹೀಗೆ ನಡೆಯುತ್ತದೆ.
Advertisement
ಜಿಲ್ಲೆಯಾದ್ಯಂತ ನೂರಾರು ಜನ ಸೇರುವ ಎಲ್ಲ ಮಳಿಗೆಗಳನ್ನು, ಮಾರುಕಟ್ಟೆಯನ್ನು ಬಂದ್ ಮಾಡಬೇಕು ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜನತಾ ಕರ್ಫ್ಯೂ ಸಂದರ್ಭ ಮಲ್ಪೆ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಆದರೆ ಇಂದು ಬೆಳಗಿನ ಜಾವ ಪ್ರತಿನಿತ್ಯದಂತೆ ವ್ಯಾಪಾರ ವಹಿವಾಟು ಶುರುವಾಗಿತ್ತು. ಮೀನು ಖರೀದಿ ವ್ಯಾಪಾರ ಎಲ್ಲವೂ ಜೋರಾಗಿ ನಡೆದಿತ್ತು. ಮಲ್ಪೆ ಬಂದರಿನಲ್ಲಿ ಬೆಳಗ್ಗೆ 5 ಗಂಟೆಯಿಂದ ಸುಮಾರು 10 ಗಂಟೆಯವರೆಗೂ ವಹಿವಾಟು ನಡೆಯುತ್ತದೆ. ಈ ಸಂದರ್ಭ ಗ್ರಾಹಕರು, ಮೀನು ವ್ಯಾಪಾರಿಗಳು ಇರುತ್ತಾರೆ.
Advertisement
ಕೊರೊನಾ ವಿರುದ್ಧ ಸೆಕ್ಷನ್ ಇದ್ದರೂ ಪೊಲೀಸರು, ಜಿಲ್ಲಾಡಳಿತ ಮೀನುಗಾರಿಕಾ ಇಲಾಖೆ ಕ್ರಮ ಕೈಗೊಂಡಿಲ್ಲ. ಮಲ್ಪೆ ಬಂದರಿನಲ್ಲಿ ತಮಿಳುನಾಡು ಕೇರಳದ ಕಾರ್ಮಿಕರು ಇದ್ದಾರೆ. ಮೀನು ಖರೀದಿಗಾಗಿ ವಿದೇಶದಿಂದ ಬಂದವರೂ ಇದ್ದಾರೆ. ಕಣ್ಣೆದುರೇ ಸರ್ಕಾರದ ಕಾನೂನು ನಿಯಮ ಮತ್ತು ಎಚ್ಚರಿಕೆಯನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಕೆಲ ಪ್ರಜ್ಞಾವಂತರು ದೂರಿದ್ದಾರೆ. ಅಲ್ಲದೇ ನಾಳೆಯಿಂದ ಕಟ್ಟುನಿಟ್ಟಿನ ಕ್ರಮ ಆಗಬೇಕು ಎಂದು ಒತ್ತಾಯ ಕೇಳಿ ಬಂದಿದೆ.