– ನಮ್ಮಿಂದ ನಮ್ಮ ದೇಶದ ಜನರಿಗೆ ಎಫೆಕ್ಟ್ ಆಗೋದು ಬೇಡ
– ನಾನು ಭಾರತಕ್ಕೆ ಬರಲ್ಲ, ಬಂದ್ರೆ ಸೋಂಕು ಆಗಬಹುದು
ರೋಮ್: ಲಾಕ್‍ಡೌನ್ ಪಾಲನೆ ಮಾಡಿ, ಇಲ್ಲದಿದ್ದರೆ ಅನಾಹುತ ಆಗಬಹುದು. ಇಟಲಿಯಲ್ಲೂ ಕೊರೊನಾ ಸೋಂಕು ಪತ್ತೆ ಆದ ಕೂಡಲೇ ಲಾಕ್‍ಡೌನ್ ಹೇರಿದರು. ಆದರೂ ಲಾಕ್‍ಡೌನ್ ಮೀರಿ ಜನ ಊರೆಲ್ಲ ಸುತ್ತಾಡಿದರು. ಈಗ ಲಾಕ್‍ಡೌನ್ ಮೀರಿದ್ದಕ್ಕೆ ಇಟಲಿಯಲ್ಲಿ ಸಾವು ಹೆಚ್ಚಾಯಿತು ಎಂದು ಇಟಲಿಯಿಂದ ಕನ್ನಡತಿ ಭಾರತೀಯರಿಗೆ ಸಂದೇಶ ರವಾನಿಸಿದ್ದಾರೆ.
ಮೈಸೂರು ಮೂಲದ ಅನುಶ್ರೀ ಇಟಲಿಯಲ್ಲಿ ನೆಲೆಸಿದ್ದು, ಅಲ್ಲಿಂದಲೇ ವಿಡಿಯೋ ಮಾಡಿ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಎಲ್ಲರಿಗೂ ನಮಸ್ಕಾರ, ನಾನು ಈಗ ಇಟಲಿಯಿಂದ ಮಾತನಾಡುತ್ತಿದ್ದೇನೆ. ಕೊರೊನಾ ವೈರಸ್ ಜಗತ್ತಿನಾದ್ಯಂತ ವ್ಯಾಪಿಸಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಾಗಲೇ ಸಾವಿರಾರು ಜನರು ಜೀವ ಕಳೆದುಕೊಂಡಿದ್ದಾರೆ. ಇನ್ನೂ ಸಾವಿರಾರು ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅದರಲ್ಲಿ ಇಟಲಿ ಕೂಡ ಟಾಪ್ ಲಿಸ್ಟಲಿದೆ. ಇಟಲಿಯಲ್ಲೂ 6 ಸಾವಿರಕ್ಕೂ ಅಧಿಕ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
Advertisement
ಮೊದಲಿಗೆ ಇಟಲಿಯ ಮಿಲನ್‍ನಲ್ಲಿ ಕೊರೊನಾ ವೈರಸ್ ಕಂಡು ಬಂದಿತ್ತು. ಕೊರೊನಾ ವೈರಸ್ ಪತ್ತೆಯಾದ ಒಂದೇ ವಾರಕ್ಕೆ ಇಟಲಿ ಸರ್ಕಾರ ಲಾಕ್‍ಡೌನ್ ಮಾಡಿತ್ತು. ಆದರೆ ಜನರು ಸರ್ಕಾರ ಮಾಡಿದ ನಿಯಮವನ್ನು ಪಾಲಿಸದೇ ಮನೆಯಿಂದ ಹೊರಗಡೆ ಓಡಾಡಲು ಶುರು ಮಾಡಿದರು. ಬೇರೆ ಬೇರೆ ಊರಿಗಳಿಗೆ ಓಡಾಡಲು ಶುರು ಮಾಡಿದರು. ಇದರಿಂದ ಇಡೀ ಇಟಲಿ ದೇಶಾದ್ಯಂತ ವೈರಸ್ ವ್ಯಾಪಿಸಿದ್ದು, ಈಗ ಇಟಲಿ ಸಂಪೂರ್ಣ ಲಾಕ್‍ಡೌನ್ ಆಗಿದೆ.
Advertisement
ನಾನು ಫೆ.23ರಂದು ಕೊನೆಯ ಬಾರಿಗೆ ಆಫಿಸ್‍ಗೆ ಹೋಗಿದ್ದೆ. ಸುಮಾರು ಒಂದು ತಿಂಗಳಾಯಿತು. ನಾನು ಮನೆಯಲ್ಲಿಯೇ ಇದ್ದೇನೆ, ಹೊರಗಡೆ ಹೋಗಿಲ್ಲ. ಆದರೆ ನಮ್ಮ ಜೀವನ ಕಷ್ಟವಾಗಿಲ್ಲ. ಎರಡು ವಾರಕ್ಕೊಮ್ಮೆ ಮನೆಯಿಂದ ಒಬ್ಬರು ಮಾತ್ರ ಹೊರಗೆ ಹೋಗಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ನಮಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ ಎಂದರು.
Advertisement
ಇಟಲಿಯಲ್ಲಿ ಎರಡನೇ ವಾರ ಕೊರೊನಾ ವೈರಸ್ ಇದ್ದಾಗ 245 ಪ್ರಕರಣ ಇತ್ತು. ಈಗ ಇದೇ ಪರಿಸ್ಥಿತಿಯಲ್ಲಿ ನಮ್ಮ ಭಾರತ ಕೂಡ ಇದೆ. ಭಾರತಕ್ಕೆ ಕೊರೊನಾ ವೈರಸ್ ಬಂದು 2 ವಾರ ಆಗಿದೆ. ಇಲ್ಲಿಯವರೆಗೂ 511 ಪಾಸಿಟಿವ್ ಪ್ರಕರಣ ಆಗಿದೆ. ಹೀಗಾಗಿ ದಯವಿಟ್ಟು ಎಲ್ಲರೂ ಮನೆಯಲ್ಲಿರಿ. ಹೊರಗೆ ಬರಬೇಡಿ, ಎಲ್ಲೂ ಹೋಗಬೇಡಿ. ನಮ್ಮ ಭಾರತ ಇನ್ನೊಂದು ಇಟಲಿ ಆಗುವುದು ಬೇಡ. ಇಟಲಿ ಸಣ್ಣ ದೇಶ ಸುಮಾರು 6.5 ಕೋಟಿ ಜನಸಂಖ್ಯೆ ಇದೆ. ನಮ್ಮ ಕರ್ನಾಟಕದಷ್ಟೂ ಇಲ್ಲ. ನಮ್ಮ ಇಂಡಿಯಾದಲ್ಲಿ 1.3 ಬಿಲಿಯನ್ ಜನಸಂಖ್ಯೆ ಇದೆ. ದಯವಿಟ್ಟು ಯೋಚನೆ ಮಾಡಿ ನಮ್ಮಿಂದ ನಮ್ಮ ದೇಶದ ಜನರಿಗೆ ಎಫೆಕ್ಟ್ ಆಗುವುದು ಬೇಡ. ಸುಮ್ಮನೆ ಬೇರೆ ಕಡೆಗೆ ಪ್ರಯಾಣ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.
Advertisement
ನಾನು ಭಾರತಕ್ಕೆ ಬರಬಹುದು. ಯಾರೂ ಕೂಡ ಬರಬೇಡ ಎಂದು ಹೇಳಿಲ್ಲ. ನಾನು ಒಂದು ತಿಂಗಳಿಂದ ಮನೆಯಲ್ಲಿದ್ದೀನಿ. ಯಾವುದೇ ಕೊರೊನಾ ಲಕ್ಷಣ ನನಗಿಲ್ಲ. ನಾನು ಆರಾಮಾಗಿ ಪ್ರಯಾಣ ಮಾಡಬಹುದು. ಆದರೆ ಪ್ರಯಾಣ ಮಾಡುವಾಗ ಕೊರೊನಾ ವೈರಸ್ ಸೋಂಕು ಆಗಬಹುದು. ನಾನು ಬಂದು 14 ದಿನ ಕ್ವಾರಂಟೈನ್‌ನಲ್ಲಿ ಇರುವಾಗ ಇನ್ನೂ ನಾಲ್ವರಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಆದ್ದರಿಂದ ನಾನು ಭಾರತಕ್ಕೆ ಬರುತ್ತಿಲ್ಲ. ಭಾರತದಲ್ಲಿ ಇನ್ನೂ ಹೆಚ್ಚಾಗಿ ಕೊರೊನಾ ವೈರಸ್ ಆಗುವುದು ಬೇಡ. ಯಾರೂ ಪ್ರಯಾಣ ಮಾಡಬೇಡಿ. ಮನೆಯಲ್ಲಿರಿ ಎಂದು ಅನುಶ್ರೀ ಮನವಿ ಮಾಡಿಕೊಂಡಿದ್ದಾರೆ.