ಕೊರೊನಾ ಮುಕ್ತವಾಗಿದ್ದ ಗೌರಿಬಿದನೂರಿಗೆ ಮತ್ತೆ ವಕ್ಕರಿಸಿದ ಸೋಂಕು

Public TV
2 Min Read
Corona Lab a

ಚಿಕ್ಕಬಳ್ಳಾಪುರ: ಕೊರೊನಾ ಸೋಂಕು ಮುಕ್ತವಾಗಿದ್ದ ಜಿಲ್ಲೆಯ ಗೌರಿಬಿದನೂರಿಗೆ ಮತ್ತೆ ಸೋಂಕು ವಕ್ಕರಿಸಿದ್ದು, ಜಿಲ್ಲೆಯಲ್ಲಿ ಇಂದೂ ಸಹ ಹೊಸ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 18ಕ್ಕೆ ಏರಿದೆ.

ಗೌರಿಬಿದನೂರಿನ 11 ಮಂದಿ ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಹೀಗಾಗಿ ಗೌರಿಬಿದನೂರು ನಗರ ಕೊರೊನಾ ಮುಕ್ತವಾಯಿತು ಅಂತಲೇ ಎಲ್ಲರೂ ಭಾವಿಸಿದ್ದರು. ಆದರೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದ ಚಿಕ್ಕಬಳ್ಳಾಪುರ ನಗರದ 18 ವರ್ಷದ ಯುವಕನೊರ್ವನಿಗೆ ಕೊರೊನಾ ತಗುಲಿರುವುದು ದೃಢವಾಗಿದೆ.

Corona dd

ಈ ಯುವಕ ಮಾರ್ಚ್ 24ರಂದು ಚಿಕ್ಕಬಳ್ಳಾಪುರ ನಗರದಿಂದ ಹಿಂದೂಪುರದ ಸಂಬಂಧಿಕರ ಮನೆಗೆ ತೆರಳಿದ್ದ. ಲಾಕ್‍ಡೌನ್ ಹಿನ್ನೆಲೆ ಮರಳಿ ಚಿಕ್ಕಬಳ್ಳಾಪುರ ಕ್ಕೆ ಬರಲಾಗದೆ ಅಲ್ಲೇ ಉಳಿದುಕೊಂಡಿದ್ದ. ಆದರೆ ಏಪ್ರಿಲ್ 23ರ ರಾತ್ರಿ ಈತನ ಸಂಬಂಧಿಕರು ಹಿಂದೂಪುರದಿಂದ ಮಾಂಸ ಸಾಗಾಟ ಮಾಡಿಕೊಂಡು ಬೊಲೆರೋ ವಾಹನದಲ್ಲಿ ಶಿವಾಜಿನಗರಕ್ಕೆ ಹೊರಟಿದ್ದರು. ಇದೇ ವಾಹನದಲ್ಲಿ ಈತ ಕೂಡ ತನ್ನನ್ನ ಚಿಕ್ಕಬಳ್ಳಾಪುರಕ್ಕೆ ಡ್ರಾಪ್ ಮಾಡುವಂತೆ ಕೇಳಿಕೊಂಡಿದ್ದು, ಅದೇ ವಾಹನದಲ್ಲಿ ಆಗಮಿಸಿದ್ದ.

corona FINAL

ಆದರೆ ಆಂಧ್ರ-ಕರ್ನಾಟಕ ಗಡಿಭಾಗದ ಚೆಕ್‍ಪೋಸ್ಟ್ ತಪ್ಪಿಸಿ ಚಂದನದೂರು ಗ್ರಾಮದ ಬಳಿ ಬರುವಾಗ ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ಸ್ಥಳೀಯ ಗ್ರಾಮ ಪಂಚಾಯತಿ ಪಿಡಿಒ, ಬಿಲ್ ಕಲೆಕ್ಟರ್, ಕಂಪ್ಯೂಟರ್ ಅಪರೇಟರ್ ಹಾಗೂ 7 ಮಂದಿ ಗ್ರಾಮ ಪೊಲೀಸ್ ಪಡೆಯ ಯುವಕರು ವಾಹನವನ್ನ ತಡೆದು ವಿಚಾರಿಸಿದ್ದಾರೆ. ಈ ವೇಳೆ ತರಕಾರಿ ಕ್ರೇಟ್ ಅಡ್ಡ ಇಟ್ಟು ವಾಹನದೊಳಗೆ ತರಕಾರಿ ಸಾಗಾಟ ಮಾಡುತ್ತಿರುವುದಾಗಿ ಸುಳ್ಳು ಹೇಳಿದ್ದರು. ಅನುಮಾನ ಬಂದು ಪರಿಶೀಲನೆ ನಡೆಸಿದಾಗ ವಾಹನದೊಳಗೆ ಮಾಂಸ ಪತ್ತೆಯಾಗಿತ್ತು. ಇದರಿಂದ ವಾಹನ ಸಮೇತ ಮೂವರನ್ನ ಗೌರಿಬಿದನೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆತಂದಿದ್ದರು. ರಾತ್ರಿ ಮೂರು ಗಂಟೆಯಿಂದ ಬೆಳಿಗ್ಗೆ 08 ಗಂಟೆಯವರೆಗೂ ಈ ಕೊರೊನಾ ಪಾಸಿಟಿವ್ ಯುವಕ ಠಾಣೆಯಲ್ಲೇ ಇದ್ದನು.

Corona Virus 4 1

ಹಿಂದೂಪುರದಲ್ಲೂ ಸಹ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆ ಅನುಮಾನದ ಮೇರೆಗೆ ಮೂವರನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಒರ್ವನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಉಳಿದ ಇಬ್ಬರಿಗೆ ನೆಗೆಟಿವ್ ಬಂದಿದೆ. ಹೀಗಾಗಿ ಸದ್ಯ ಗೌರಿಬಿದನೂರಿಗೆ ಮತ್ತೆ ಕೊರೊನಾ ಕಂಟಕ ಶುರುವಾಗಿದ್ದು, ಈ ಮೂವರನ್ನ ಹಿಡಿದ ಪಿಡಿಓ, ಕಂಪ್ಯೂಟರ್ ಅಪರೇಟರ್, ಬಿಲ್‍ಕಲೆಕ್ಟರ್, 07 ಮಂದಿ ಗ್ರಾಮ ಪೊಲೀಸ್ ಪಡೆಯ ಯುವಕರು ಸೇರಿದಂತೆ ಗೌರಿಬಿದನೂರು ಗ್ರಾಮಾಂತರ ಠಾಣೆಯ 10 ಮಂದಿ ಪೊಲೀಸರನ್ನ ಸದ್ಯಕ್ಕೆ ಕ್ವಾರಂಟೈನ್ ಮಾಡಲಾಗಿದೆ ಎಂದು ಎಸ್‍ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಅಪ್ಪಿ ತಪ್ಪಿ ಈ ಯುವಕನನ್ನ ಗೌರಿಬಿದನೂರಿನಲ್ಲಿ ತಡೆಯದೆ ಇದ್ದಿದ್ದಲ್ಲಿ ಈತ ಶಿವಾಜಿನಗರ ಸೇರಿದಂತೆ ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸಿ ಮತ್ಯಾರಾರಿಗೆ ಕೊರೊನಾ ಸೋಂಕು ಹರಡಿಸುತ್ತಿದ್ದನೋ ಗೊತ್ತಿಲ್ಲ. ಆದರೆ ಈ ವಾಹನವನ್ನ ತಡೆದ ಕಂದಾಯ ಇಲಾಖಾಧಿಕಾರಿಗಳು ಹಾಗೂ ಇವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ ಪೊಲೀಸರ ಸಮಯಪ್ರಜ್ಞೆಯಿಂದ ಮತ್ತಷ್ಟು ಮಂದಿಗೆ ಕೊರೊನಾ ಹರಡೋದು ತಪ್ಪಿದಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *