ಕೊರೊನಾ ಭಯದಿಂದ ಗ್ರಾಮಕ್ಕೆ ಮರಳುತ್ತಿದ್ದವ್ರು ಮಸಣ ಸೇರಿದ್ರು

Public TV
2 Min Read
RCR Accident

– ಲಾರಿ ಡಿಕ್ಕಿ ರಭಸಕ್ಕೆ 4 ಜನ ಅಪ್ಪಚ್ಚಿ, ಸಾವಿನ ಸಂಖ್ಯೆ 7ಕ್ಕೆ
– 4 ಜನರ ಸ್ಥಿತಿ ಚಿಂತಾಜನಕ

ರಾಯಚೂರು: ಕೊರೊನಾ ವೈರಸ್ ಭಯದಿಂದ ಲಾಕ್‍ಡೌನ್ ಮಧ್ಯ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದ ರಾಯಚೂರು ಜಿಲ್ಲೆಯ 30 ಜನರಿದ್ದ ಮಿನಿ ಟ್ರಕ್‍ಗೆ ಲಾರಿ ಡಿಕ್ಕಿ ಹೊಡೆದು ಏಳ ಜನ ಮೃತಪಟ್ಟ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಸುರಪೂರ ತಾಲೂಕಿನ ಕಕ್ಕೇರಿ ಗ್ರಾಮದ ಬಸಮ್ಮ, ಹನುಮಂತ, ಲಿಂಗಸ್ಗೂರು ತಾಲೂಕಿನ ರಾಯದುರ್ಗ ಗ್ರಾಮದ ಶ್ರೀದೇವಿ, ರಂಗಪ್ಪ, ಶರಣಪ್ಪ, ಅಮರಪ್ಪ ಹಾಗೂ ಚಿಂಚರಕಿ ಗ್ರಾಮದ ಕೊಳ್ಳಪ್ಪ ಮೃತ ದುರ್ದೈವಿಗಳು. ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಹೈದರಾಬಾದ್‍ನ ಉಸ್ಮಾನಿಯಾ ಆಸ್ಪತ್ರೆಯಲ್ಲಿ  ದಾಖಲಿಸಲಾಗಿದೆ.

RCR Accident 2

ಆಗಿದ್ದೇನು?:
ಕೊರೊನಾ ವೈರಸ್‍ನಿಂದ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದ್ದು, ರಾಯಚೂರಿನ ರಸ್ತೆ ನಿರ್ಮಾಣ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಜೊತೆಗೆ ಕೊರೊನಾ ಭಯಕ್ಕೆ ಸೂರ್ಯಪೇಟೆಯಿಂದ 30 ಜನರು ತಮ್ಮ ಗ್ರಾಮಗಳಿಗೆ ಮಿನಿ ಟ್ರಕ್‍ನಲ್ಲಿ ಸಾಗಿಸುತ್ತಿದ್ದರು. ಶಂಶಾಬಾದ್ ಬಳಿ ವೇಗವಾಗಿ ಬಂದ ಲಾರಿ ಚಾಲಕ ನಿಯಂತ್ರಣ ತಪ್ಪಿ ಹಿಂಬದಿಯಿಂದ ಮಿನಿ ಟ್ರಕ್‍ಗೆ ಡಿಕ್ಕಿ ಹೊಡೆದಿದ್ದ. ಪರಿಣಾಮ ಮಿನಿ ಟ್ರಕ್‍ನಲ್ಲಿದ್ದ ನಾಲ್ವರು ಸ್ಥಳದಲ್ಲಿ ಪ್ರಾಣಬಿಟ್ಟಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿದ್ದರು.

Corona Virus 10

ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಶಂಶಾಬಾದ್ ಗ್ರಾಮೀಣ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಆರ್.ವೆಂಕಟೇಶ್ ಅವರು ಪರಿಶೀಲನೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡವರನ್ನು ಶಂಶಾಬಾದ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದರಿಂದ ಗಾಯಾಳುಗಳನ್ನು ಹೈದರಾಬಾದ್‍ನ ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಚಿಕಿತ್ಸೆ ಫಲಿಸದೆ ಮೂವರು ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರಿಗೆ ಇನ್ನೂ ಚಿಕಿತ್ಸೆ ಕೊಡಲಾಗುತ್ತದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಯಚೂರು ಎಸ್‍ಪಿ, ತೆಲಂಗಾಣದಕ್ಕೆ ಗುಳೆ ಹೋಗಿದ್ದ ರಾಯಚೂರಿನ ಜನರು ಕೊರೊನಾ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ತಮ್ಮ ಗ್ರಾಮಗಳಿಗೆ ಮಾರ್ಚ್ 27ರಂದು ಬೆಳಗಿನ ಜಾವ 12ಗಂಟೆ ಸುಮಾರಿಗೆ ವಾಪಸ್ ಆಗುತ್ತಿದ್ದರು. ಆದರೆ ಶಂಶಾಬಾದ್ ರಿಂಗ್ ರೋಡ್‍ನಲ್ಲಿ ಕಾರ್ಮಿಕರಿದ್ದ ಮಿನಿ ಟ್ರಕ್ ಕೆಟ್ಟು ನಿಂತಿತ್ತು. ಅದನ್ನು ರಿಪೇರಿ ಮಾಡುತ್ತಿದ್ದಾಗ ಹಿಂದುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಅಪಘಾತದ ಸ್ಥಳದಲ್ಲಿಯೇ ನಾಲ್ಕು ಜನ ಸಾವನ್ನಪ್ಪಿದ್ದಾರೆ. ಮೂವರು ಉಸ್ಮಾನಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *