ಉಡುಪಿ: ಜಿಲ್ಲೆಯಲ್ಲಿ ಕೊರೊನಾ ವೈರಸ್‍ಗೆ ಸಂಬಂಧಪಟ್ಟಂತೆ ಇವತ್ತು ನಾಲ್ಕು ಹೊಸ ಶಂಕಿತ ಪ್ರಕರಣಗಳು ದಾಖಲಾಗಿದೆ. ಮಣಿಪಾಲ ಕೆಎಂಸಿಗೆ ಇಬ್ಬರು ಕೊರೊನಾ ಲಕ್ಷಣವಿರುವ ರೋಗಿಗಳು ದಾಖಲಾಗಿದ್ದಾರೆ.
ಉಡುಪಿ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ತಲಾ ಒಬ್ಬೊಬ್ಬ ರೋಗಿಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ದಾಖಲಾದ ನಾಲ್ವರಲ್ಲಿ ಶೀತ, ಕೆಮ್ಮು, ಕಫದ ಲಕ್ಷಣಗಳು ಕಂಡುಬಂದಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ಕೊಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಪ್ರಯೋಗಾಲಯದಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದರಿಂದ ನಾಲ್ವರ ಗಂಟಲ ಸ್ರಾವವನ್ನು ಹಾಸನಕ್ಕೆ ಕಳುಹಿಸಲಾಗಿದೆ. ನಾಲ್ವರು ಬಹರೇನ್ ಸೌದಿ ಮತ್ತು ಆಸ್ಟ್ರೇಲಿಯಾದಿಂದ ಬಂದಿದ್ದಾರೆ. ಅವರಲ್ಲಿ ಕೊರೊನಾ ಲಕ್ಷಣಗಳಿದ್ದು, ಸ್ವಯಂಪ್ರೇರಿತವಾಗಿ ಅವರೇ ಆಸ್ಪತ್ರೆಗಳನ್ನು ಸಂಪರ್ಕ ಮಾಡಿದ್ದಾರೆ.
ಉಡುಪಿ ಜಿಲ್ಲೆಗೆ ಫೆಬ್ರವರಿ 29 ರಿಂದ ಈವರೆಗೆ 364 ಜನ ವಿದೇಶದಿಂದ ಬಂದಿದ್ದರು. ಎಲ್ಲರ ಮೇಲೆ ಈ ವಾರದಿಂದ ನಿಗಾ ವಹಿಸಲಾಗಿದೆ. ವಿದೇಶದಿಂದ ವಾಪಸ್ಸಾದವರು ಆರೋಗ್ಯ ನಿರ್ಲಕ್ಷ್ಯ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.