ನಾವು ಬದುಕೋಣ, ಬೇರೆಯವ್ರನ್ನೂ ಬದುಕೋಕೆ ಬಿಡೋಣ

Public TV
2 Min Read
AUSTRALIA 1

– ಆಸ್ಟ್ರೇಲಿಯಾದಲ್ಲಿ ಕೊರೊನಾದ ಭೀಕರತೆ ಬಿಚ್ಚಿಟ್ಟ ಕನ್ನಡತಿ

ಕ್ಯಾನ್ಬೆರಾ: ಕೊರೊನಾ ವೈರಸ್ ಇಡೀ ಜಗತ್ತಿನಾದ್ಯಂತ ದಿನೇ ದಿನೇ ಹೆಚ್ಚಾಗಿ ವ್ಯಾಪಿಸುತ್ತಿದೆ. ಅದರಲ್ಲೂ ಆಸ್ಟ್ರೇಲಿಯಾದಲ್ಲಿ ಕ್ಷಣ ಕ್ಷಣಕ್ಕೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಆಸ್ಟ್ರೇಲಿಯಾದಲ್ಲಿನ ಕೊರೊನಾದ ಭೀಕರತೆಯನ್ನ ಕನ್ನಡತಿಯೊಬ್ಬಳು ವಿಡಿಯೋ ಮೂಲಕ ಬಿಚ್ಚಿಟ್ಟಿದ್ದಾಳೆ.

ಶಿವಮೊಗ್ಗ ಮೂಲದ ಶುಭ್ರತಾ ವಿಡಿಯೋ ಮೂಲಕ ಆಸ್ಟ್ರೇಲಿಯಾದಲ್ಲಿನ ಕೊರೊನಾ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಶುಭ್ರತಾ ಹೇಳಿದ್ದೇನು?
ನಾನು ಆಸ್ಟ್ರೇಲಿಯಾದ ಮೆಲ್ಬರ್ನ್ ನಗರದಲ್ಲಿ ಕಳೆದ 8 ವರ್ಷಗಳಿಂದ ನೆಲೆಸಿದ್ದೇನೆ. ಆಸ್ಟ್ರೇಲಿಯಾದಲ್ಲಿ ಸದ್ಯದ ಪರಿಸ್ಥಿತಿ ಹೇಗಿದೆ, ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಈ ವಿಡಿಯೋ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

Corona 15

ಆಸ್ಟ್ರೇಲಿಯಾದಲ್ಲಿ ಜನವರಿ 25ರಂದು ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿತ್ತು. ಅಂದಿನಿಂದ ಇಂದಿನವರೆಗೆ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 3,800ಕ್ಕೂ ಅಧಿಕ ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದುವರೆಗೂ 14 ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ 2ನೇ ಹಂತದ ಲಾಖ್‍ಡೌನ್‍ನಲ್ಲಿದೆ.

ಅಂದರೆ ಸೂಪರ್ ಮಾರ್ಕೆಟ್, ಮೆಡಿಕಲ್ ಶಾಪ್, ದಿನಸಿ, ಪೆಟ್ರೋಲ್ ಬಂಕ್ ಓಪನ್ ಮಾತ್ರ ಇದೆ. ಬೇರೆ ಯಾವ ಅಂಗಡಿಗಳು ತೆರೆದಿಲ್ಲ. ಯಾರೂ ಮನೆಯಿಂದ ಹೊರಗೆ ಹೋಗುತ್ತಿಲ್ಲ. ಎಲ್ಲರೂ ಮನೆಯಲ್ಲಿ ಇದ್ದಾರೆ. ನಾವು ಕೂಡ ಮನೆಯಲ್ಲಿಯೇ ಇದ್ದೇವೆ. ಕೆಲವರು ಮನೆಯಲ್ಲಿಯೇ ಕುಳಿತು ಕೆಲಸ ಮಾಡುತ್ತಿದ್ದಾರೆ. ಆದರೆ ಕೊರೊನಾದಿಂದ ಸಾವಿರಾರು ಜನರು ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದೆ. ಆದರೂ ಸರ್ಕಾರ ಕೆಲಸ ಕಳೆದುಕೊಂಡಿರುವ ಪ್ರತಿಯೊಬ್ಬರಿಗೂ ತಿಂಗಳಿಗೆ 1000 ರೂಪಾಯಿಯಂತೆ ಆರು ತಿಂಗಳು ಕೊಡಲು ನಿರ್ಧಾರ ಮಾಡಿದೆ. ಇದರಿಂದ ಅನೇಕರಿಗೆ ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.

851527 corona testing kit

ಇಲ್ಲಿನ ಸಾರ್ವಜನಿಕರು, ಡಾಕ್ಟರ್‌ಗಳಿಗೆ ವಿಡಿಯೋ ಕಾಲ್ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ. ಆಸ್ಪತ್ರೆಗಳಿಗೆ ನೇರವಾಗಿ ಹೋಗಲು ಆಗುತ್ತಿಲ್ಲ. ಒಂದು ವೇಳೆ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಬಂದರೆ ಆಸ್ಪತ್ರೆಯ ಮುಂದೆ ಕಾರಿನಲ್ಲಿಯೇ ಕೂರಬೇಕು. ಆಸ್ಪತ್ರೆಯ ಸಿಬ್ಬಂದಿ ಸ್ಯಾನಿಟೈಸರ್ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಇಷ್ಟೆಲ್ಲಾ ಮುಂಜಾಗ್ರತಾ ಕ್ರಮವನ್ನು ಕೈಗೊಂಡರೂ ಸಹ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

AST

ಆಸ್ಟ್ರೇಲಿಯಾದಲ್ಲಿ ಒಟ್ಟು ಸಂಖ್ಯೆ 2.5 ಕೋಟಿ, ಕರ್ನಾಟಕ ಒಂದು ರಾಜ್ಯದಲ್ಲಿ 6 ಕೋಟಿ ಜನಸಂಖ್ಯೆ ಇದೆ. ಕರ್ನಾಟಕದ ಅರ್ಧದಷ್ಟು ಜನಸಂಖ್ಯೆ ಆಸ್ಟೇಲಿಯಾದಲ್ಲಿ ಇಲ್ಲ. ಆದರೂ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ಇನ್ನೂ ಭಾರತದ ಜನಸಂಖ್ಯೆಯನ್ನು ಪರಿಗಣಿಸಿದರೆ ನಾವು ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಹೀಗಾಗಿ ದಯವಿಟ್ಟು ದಯವಿಟ್ಟು ಮನೆಯಲ್ಲಿರಿ ಪೊಲೀಸ್, ವೈದ್ಯರು, ಬ್ಯಾಂಕ್ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ನಮಗಾಗಿ, ಸಮಾಜಕ್ಕಾಗಿ ಅವರು ಕೆಲಸ ಮಾಡುವಾಗ ನಾವು ಅವರಿಗಾಗಿ ಮನೆಯಲ್ಲಿರಬೇಕು ಅಷ್ಟೆ. ದಯವಿಟ್ಟು ಮನೆಯಲ್ಲಿರಿ. ಅನವಶ್ಯಕವಾಗಿ ಯಾರೂ ಹೊರ ಬರಬೇಡಿ. ಅನಿವಾರ್ಯತೆ ಇದ್ದರೆ ಎಲ್ಲಾ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡು ಬನ್ನಿ, ನಾವು ಬದುಕೋಣ, ಬೇರೆಯವರನ್ನೂ ಬದುಕೋಕೆ ಬಿಡೋಣ ಎಂದು ಶೂಭ್ರತಾ ಮನವಿ ಮಾಡಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *