– ತಂಗಿ ಭೇಟಿ ಮಾಡಿ ಪ್ರತಿಭಟನಾ ಸ್ಥಳಕ್ಕೆ 2 ಬಾರಿ ಭೇಟಿ
ನವದೆಹಲಿ: ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಸಿಎಎ ಪ್ರತಿಭಟನೆಯ ಆಯೋಜಕರಲ್ಲಿ ಒಬ್ಬರು ತಮ್ಮ ಸಹೋದರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ನಂತರ ತಾವೂ ಕೂಡ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ.
ಆಯೋಜಕರ ಸೋದರಿ ಮಾರ್ಚ್ 11 ರಂದು ಸೌದಿ ಅರೇಬಿಯಾದಿಂದ ವಾಪಸ್ ಬಂದಿದ್ದಾರೆ. ನಂತರ ಕೊರೊನಾ ವೈರಸ್ ಪರೀಕ್ಷೆ ಮಾಡಿಸಿದ್ದು, ಆಗ ವರದಿಯಲ್ಲಿ ಪಾಸಿಟಿವ್ ಬಂದಿದೆ. ಆಕೆ ಉಮ್ರಾ ಯಾತ್ರೆ ಸಂಬಂಧ ಸೌದಿ ಅರೇಬಿಯಾ ದೇಶಕ್ಕೆ ಭೇಟಿ ನೀಡಿದ್ದರು.
Advertisement
Advertisement
ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣಕ್ಕೆ ಸೌದಿ ಅರೇಬಿಯಾ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿದೆ. ಆದರೆ ಪ್ರವೇಶ ನಿಷೇಧ ಮಾಡುವ ಮೊದಲೇ ಅವರು ಸೌದಿ ಅರೇಬಿಯಾಕ್ಕೆ ಹೋಗಿದ್ದರು.
Advertisement
ನನ್ನ ಸಹೋದರಿ ಮರಳಿದ ಎರಡು ದಿನಗಳ ನಂತರ ಅಂದರೆ ಮಾರ್ಚ್ 13 ರಂದು ಭೇಟಿ ಮಾಡಿದ್ದೆ. ಅಲ್ಲಿಂದ ಒಂದೆರಡು ಬಾರಿ ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದೇನೆ. ಆ ಸಮಯದಲ್ಲಿ ನನಗೆ ರೋಗದ ಯಾವುದೇ ಲಕ್ಷಣಗಳನ್ನು ಕಂಡು ಬಂದಿಲ್ಲ. ಆದ್ದರಿಂದ ನಾನು ಎಂದಿನಂತೆ ಪ್ರತಿಭಟನೆಗೆ ಹೋಗಿದ್ದೆ ಎಂದು 35 ವರ್ಷದ ಆಯೋಜಕ ತಿಳಿಸಿದ್ದಾರೆ.
Advertisement
ನಾನು ಭೇಟಿಯಾದ ಎರಡು ದಿನಗಳ ನಂತರ ಸಹೋದರಿ ಕೊರೊನಾ ಪರೀಕ್ಷೆ ಮಾಡಿಸಿದ್ದಾಳೆ. ಆಗ ವರದಿಯಲ್ಲಿ ಪಾಸಿಟಿವ್ ಬಂದಿದೆ. ಸದ್ಯಕ್ಕೆ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
“ಸಹೋದರಿಗೆ ಕೊರೊನಾ ಪಾಸಿಟಿವ್ ಬಂದ ನಂತರ ನಾನು ಕೊರೊನಾ ವೈರಸ್ ಸೋಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದೇನೆ. ಹೀಗಾಗಿ ಈ ವಿಚಾರವನ್ನು ವೈದ್ಯರಿಗೆ ತಿಳಿಸುವುದು ಜಾಗೃತ ನಾಗರಿಕನಾಗಿ ನನ್ನ ಜವಾಬ್ದಾರಿ ಎಂದು ನಾನು ಭಾವಿಸಿದ್ದೇನೆ” ಎಂದು ಅವರು ಹೇಳಿದರು.
ನನಗೆ ಕೊರೊನಾ ವೈರಸ್‍ನ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಆದರೆ ಮಾರ್ಚ್ 16 ರಂದು ಕೆಮ್ಮು ಬಂದಿತ್ತು. ಹೀಗಾಗಿ ನಾನು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎನಿಸಿತು ಎಂದರು. ಸದ್ಯಕ್ಕೆ ಆಯೋಜಕ ದೆಹಲಿಯ ಲೋಕ ನಾಯಕ್ ಜಯಪ್ರಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ವೈದ್ಯರು ಅವರ ರಿಪೋರ್ಟ್‍ಗಾಗಿ ಕಾಯುತ್ತಿದ್ದಾರೆ.
ದೆಹಲಿಯಲ್ಲಿ ಈವರೆಗೆ 11 ಜನರು ಕೊರೊನಾ ವೈರಸ್ ಪರೀಕ್ಷೆ ಮಾಡಿಸಿದ್ದು, ಪಾಸಿಟಿವ್ ಬಂದಿದೆ. ಇಬ್ಬರು ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಆದರೆ ಇಂದು ಕೊರೊನಾ ಪ್ರಕರಣಗಳ ಸಂಖ್ಯೆ ದೇಶದಲ್ಲಿ 169ಕ್ಕೆ ಏರಿಕೆಯಾಗಿದೆ.