‘ಸಂಜೀವಿನಿ ಪರ್ವತ’ ಉಲ್ಲೇಖಿಸಿ ಮಾತ್ರೆ ಬೇಡಿದ ಬ್ರೆಜಿಲ್

Public TV
4 Min Read
Jair Bolsonaro A

– ಹನುಮಂತನನ್ನ ಉಲ್ಲೇಖಿಸಿ ಪತ್ರ ಬರೆದ ಜೈರ್ ಬೋಲ್ಸನಾರೊ
– ಯೂಟರ್ನ್ ಹೊಡೆದು ಮೋದಿ ‘ಗ್ರೇಟ್’ ಎಂದ ಟ್ರಂಪ್

ನವದೆಹಲಿ: ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಮಾಯಣದಲ್ಲಿ ಬರುವ ಸಂಜೀವಿನಿ ಪರ್ವತವನ್ನು ಉಲ್ಲೇಖಿಸಿ ಮಾತ್ರೆ ನೀಡುವಂತೆ ಮನವಿ ಮಾಡಿದ್ದಾರೆ.

ಕೋವಿಡ್-19 ವಿರುದ್ಧದ ಜಾಗತಿಕ ಹೋರಾಟದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ರಫ್ತಿಗೆ ಅನುಮತಿ ಮುಂದಾದ ಭಾರತದ ನಿರ್ಧಾರವನ್ನು ರಾಮಾಯಣದ ಪೌರಾಣಿಕ ಕಥೆಗೆ ಹೋಲಿಕೆ ಮಾಡಿದ್ದಾರೆ.

Sanjivani Parvat A

ಲಂಕಾದಲ್ಲಿ ನಡೆದ ಯುದ್ಧದಲ್ಲಿ ಭಗವಾನ್ ಶ್ರೀರಾಮನ ಸಹೋದರ ಲಕ್ಷ್ಮಣ ಭಾರೀ ಗಾಯಗೊಂಡಿದ್ದ. ಆಗ ಲಕ್ಷ್ಮಣನಿಗೆ ಚಿಕಿತ್ಸೆ ನೀಡಲು ಗಿಡಮೂಲಿಕೆ ಬೇಕಾಗಿದ್ದರಿಂದ ರಾಮನ ಪರಮಭಕ್ತ ಹನುಮಂತ ಸಂಜೀವಿನಿ ಪರ್ವತವನ್ನೇ ಹೊತ್ತುಕೊಂಡು ಬರುತ್ತಾನೆ. ಈ ಪ್ರಸಂಗವನ್ನು ನೆನೆದು ಜೈರ್ ಬೋಲ್ಸನಾರೊ ಸಂಜೀವಿನಿ ಪರ್ವತವನ್ನು ಉಲ್ಲೇಖಿಸಿ ಮಾತ್ರೆ ನೀಡುವಂತೆ ಕೇಳಿಕೊಂಡಿದ್ದಾರೆ.

ಕೊರೊನಾ ವೈರಸ್‍ನಿಂದ ಕಂಗೆಟ್ಟಿರುವ ಅಮೆರಿಕ ಸೇರಿದಂತೆ ವಿವಿಧ ದೇಶಗಳಿಗೆ ಭಾರತವು ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಪ್ಯಾರೆಸಿಟಮಾಲ್ ರಫ್ತು ಮಾಡಲು ಅನುಮತಿ ನೀಡಿದೆ. ಸರ್ಕಾರದ ಈ ನಿರ್ಧಾರದ ಹಿನ್ನೆಲೆಯಲ್ಲಿ ಬೋಲ್ಸನಾರೊ ಅವರು ಪತ್ರವನ್ನು ಬರೆದಿದ್ದಾರೆ.

Jair Bolsonaro

ಭಗವಾನ್ ರಾಮನ ಸಹೋದರ ಲಕ್ಷ್ಮಣನ ಜೀವವನ್ನು ಉಳಿಸಲು ಹನುಮಂತ ಹಿಮಾಲಯದಿಂದ ಸಂಜೀವಿನಿ ತಂದ. ಯೇಸು ಅನಾರೋಗ್ಯದಿಂದ ಬಳಲುತ್ತಿದ್ದವರನ್ನು ಗುಣಪಡಿಸಿದನು ಹಾಗೂ ಬಾರ್ಟಿಮಿಯುಗೆ ಕಣ್ಣು ಕಾಣುವಂತೆ ಮಾಡಿದ. ಅಂತೆ ಜಗತ್ತಿನ ಎಲ್ಲಾ ಜನರ ಸಲುವಾಗಿ ಭಾರತ ಮತ್ತು ಬ್ರೆಜಿಲ್ ಈ ಜಾಗತಿಕ ಬಿಕ್ಕಟ್ಟನ್ನು ನಿವಾರಿಸಲು ಶ್ರಮಿಸುತ್ತಿವೆ ಎಂದು ಬೋಲ್ಸನಾರೊ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಅಮೆರಿಕ ಏಪ್ರಿಲ್ 6ರಂದು ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಪ್ಯಾರೆಸಿಟಮಾಲ್‍ಗಳಿಗೆ ಬೇಡಿಕೆ ಇಟ್ಟಿತ್ತು. ಅಮೆರಿಕ ಸೇರಿದಂತೆ ಕೊರೊನಾ ಬಾಧಿತ ರಾಷ್ಟ್ರಗಳಿಗೆ ಮಾನವೀಯತೆ ದೃಷ್ಟಿಯಲ್ಲಿ ಆ್ಯಂಟಿ ಮಲೇರಿಯಾ (ಹೈಡ್ರೋಕ್ಸಿಕ್ಲೋರೋಕ್ವೀನ್) ಔಷಧಿ ರಫ್ತು ಮಾಡುವುದಾಗಿ ಭಾರತ ಹೇಳಿದೆ. 26 ಜೆನರಿಕ್ ಔಷಧಿಗಳ ರಫ್ತಿಗೆ ಕಳೆದ ತಿಂಗಳಷ್ಟೇ ಭಾರತ ನಿರ್ಬಂಧ ಹೇರಿತ್ತು. ಆದರೆ ಅಮೆರಿಕದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆ್ಯಂಟಿ ಮಲೇರಿಯಾ ಔಷಧಿಯನ್ನು ತ್ವರಿತವಾಗಿ ರಫ್ತು ಮಾಡುವಂತೆ ಅಮೆರಿಕ ಕೇಳಿತ್ತು.

Trump App

ಈ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು, ಒಂದು ವೇಳೆ ಆ್ಯಂಟಿ ಮಲೇರಿಯಾ ಔಷಧಿಯನ್ನು ರಫ್ತು ಮಾಡದಿದ್ದಲ್ಲಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೆದರಿಸಿದ್ದರು. ಇದಕ್ಕೆ ದೇಶದಲ್ಲಿ ಟೀಕೆ ವ್ಯಕ್ತವಾಗಿದೆ. ದೇಶವೊಂದರ ವಿರುದ್ಧ ಇಂಥ ಬೆದರಿಕೆ ನೋಡಿಯೇ ಇಲ್ಲ ಅಂತ ಕಾಂಗ್ರೆಸ್‍ನ ಶಶಿತರೂರ್ ಮಂಗಳವಾರ ಟ್ವೀಟ್ ಮಾಡಿದ್ದರು.

ಆದರೆ ಈಗ ಟ್ರಂಪ್ ತಮ್ಮ ಹೇಳಿಕೆ ಪರಿಣಾಮ ಅರಿತು ಯೂಟರ್ನ್ ಹೊಡೆದಿದ್ದಾರೆ. ”ನಾನು ಲಕ್ಷಾಂತರ ರೂ. ಮೌಲ್ಯದ ಪ್ರಮಾಣದಲ್ಲಿ ಔಷಧಿ ಖರೀದಿಸಿದೆ. ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದೇನೆ. ಆದಷ್ಟು ವೇಗ ಭಾರತದಿಂದ ರಫ್ತು ಆಗುತ್ತದೆ. ಅವರು ಗ್ರೇಟ್, ನಿಜವಾಗಿಯೂ ಒಳ್ಳೆಯವರಾಗಿದ್ದಾರೆ. ಔಷಧಿ ಭಾರತಕ್ಕೆ ಬೇಕಾಗಿರುವುದರಿಂದಲೇ ರಫ್ತಿನ ಮೇಲೆ ನಿರ್ಬಂಧ ಹೇರಿದ್ದರು. ಆದರೆ ಈಗ ಅವರಿಂದ ಸಾಕಷ್ಟು ಒಳ್ಳೆಯ ಸಂಗತಿಗಳು ಬರುತ್ತಿವೆ” ಎಂದು ಟ್ರಂಪ್ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದಾರೆ.

Trump Modi A

ಬಹಳಷ್ಟು ಜನರು ಭಾರತದ ಸಹಾಯವನ್ನು ನೋಡುತ್ತಿದ್ದಾರೆ, ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ಕೆಟ್ಟ ಕಥೆಗಳನ್ನು ಕೇಳುವುದಿಲ್ಲ. ಭಾರತಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.

ಕೊರೊನಾ ಮೇಲೆ ಪರಿಣಾಮ ಬೀರುತ್ತಾ?
ಅಮೆರಿಕದಲ್ಲಿ 3.60 ಲಕ್ಷ ಮಂದಿಗೆ ಕೊರೊನಾ ಬಂದಿದ್ದು ಈಗಾಗಲೇ 10 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕೊರೊನಾಗೆ ಸಧ್ಯಕ್ಕೆ ಯಾವುದೇ ಔಷಧಿ ಇಲ್ಲ. ಹೀಗಾಗಿ ಇಂದು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾ ಎನ್ನವ ಪ್ರಶ್ನೆ ಏಳುವುದು ಸಹಜ. ಮಲೇರಿಯಾ ರೋಗದ ವಿರುದ್ಧವಾಗಿ ಹೋರಾಡಲು ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ನೀಡಲಾಗುತ್ತಿದೆ. ಭಾರತದಲ್ಲಿ ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಈ ಮಾತ್ರೆಗಳನ್ನು ದೇಶದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ.

hydroxychloroquine computer

ಮಲೇರಿಯಾಗೆ ನೀಡುವ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದಲೇ ಕೊರೊನಾ ಗುಣವಾಗುತ್ತದೆ ಎಂದು ಪೂರ್ಣವಾಗಿ ಹೇಳಲು ಬರುವುದಿಲ್ಲ. ಯಾಕೆಂದರೆ ವಿಶ್ವ ಆರೋಗ್ಯ ಸಂಸ್ಥೆಯೇ ಯಾವುದೇ ಔಷಧಿಯಿಂದ ಕೊರೊನಾ ವಾಸಿಯಾಗಿದ್ದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿದೆ.

ಪರಿಸ್ಥಿತಿ ಹೀಗಿರುವಾಗ ತಾತ್ಕಾಲಿಕವಾಗಿ ಕೊರೊನಾಗೆ ಯಾವ ಮಾತ್ರೆ ನೀಡಿದರೆ ಕಡಿಮೆಯಾಗುತ್ತದೆ ಎನ್ನುವ ಬಗ್ಗೆ ಕಂಪನಿಯೊಂದು ಅಧ್ಯಯನ ನಡೆಸಿದೆ. ಹಲವು ದೇಶಗಳಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಜಾಗತಿಕವಾಗಿ ಆರೋಗ್ಯ ಕುರಿತಾಗಿ ಅಧ್ಯಯನ ಮಾಡುವ sermo ಕಂಪನಿ ತಿಳಿಸಿದ ಹಿನ್ನೆಲೆಯಲ್ಲಿ ಈ ಮಾತ್ರೆಗೆ ಬೇಡಿಕೆ ಹೆಚ್ಚಾಗಿದೆ.

Corona Virus 6

ಅಧ್ಯಯನ ಹೇಳಿದ್ದು ಏನು?
ಕೊರೊನಾ ತೀವ್ರವಾಗಿ ಹರಡುತ್ತಿರುವ ಯುರೋಪ್, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ 30 ದೇಶಗಳ ಒಟ್ಟು 6,227 ಮಂದಿ ವೈದ್ಯರನ್ನು ಸಂಪರ್ಕಿಸಿ ಅಧ್ಯಯನ ನಡೆಸಲಾಗಿದೆ. ಈ ಪೈಕಿ ಶೇ.37ರಷ್ಟು ಮಂದಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಪರಿಣಾಮ ಬೀರಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೊರೊನಾ ತಡೆಗಟ್ಟಲು ನೀಡಲಾಗುವ ಔಷಧಿಗಳ ಪೈಕಿ ಶೇ.56 ನೋವು ನಿವಾರಕಗಳು, ಶೇ.41 ಅಜಿಥ್ರೊಮೈಸಿನ್, ಶೇ.33 ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗುತ್ತಿದೆ. ಈ ಪೈಕಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಉತ್ತಮ ಪರಿಣಾಮ ಬೀರಿದೆ ಎಂದು ಅಧ್ಯಯನ ತಿಳಿಸಿದೆ.

CORONA

ಸ್ಪೇನ್ ಶೇ.72, ಇಟಲಿ ಶೇ.49, ಬ್ರೆಜಿಲ್ ಶೇ.41, ಮೆಕ್ಸಿಕೋ ಶೇ.39, ಫ್ರಾನ್ಸ್ ಶೇ.28, ಅಮೆರಿಕ ಶೇ.23, ಜರ್ಮನಿ ಶೇ.17, ಕೆನಡಾ ಶೇ.16, ಇಂಗ್ಲೆಂಡ್ ಶೇ.13, ಜಪಾನ್ ಶೇ.7 ರಷ್ಟು ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗಿದೆ.

ಟ್ರಂಪ್ ಹೇಳಿದ್ದು ಏನು?
ಇಂದಿನ ತುರ್ತು ಪರಿಸ್ಥಿತಿಯಲ್ಲಿ ಲ್ಯಾಬ್‍ನಲ್ಲಿ ಕೊರೊನಾಗೆ ಔಷಧಿ ಕಂಡು ಹುಡುಕುವುದು ಬಹಳ ಸವಾಲಿನ ಕೆಲಸ. ಹೀಗಿರುವಾಗ ಅಮೆರಿಕನ್ನರ ರಕ್ಷಣೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಅಗತ್ಯವಾಗಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ಎರಡು ಮೆಡಿಕಲ್ ಇತಿಹಾಸದಲ್ಲಿ ಗೇಮ್ ಚೇಂಜರ್ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ನಾನು ಕೂಡ ಈ ಮಾತ್ರೆಯನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *