– ಶಾಲೆಗೆ ಬೀಗ ಹಾಕಿ ಪುಟಾಣಿಗಳಿಗೆ ಕ್ಲಾಸ್
– ಪಬ್ಲಿಕ್ ಟಿವಿ ಕ್ಯಾಮೆರಾ ಕಾಣುತ್ತಿದ್ದಂತೆ ಉಲ್ಟಾ ಹೊಡೆದ ಶಾಲಾ ಸಿಬ್ಬಂದಿ
ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತದ ಎಲ್ಲಾ ನರ್ಸರಿ ಶಾಲೆಗಳಿಗೆ ಸರ್ಕಾರ ರಜೆ ಘೋಷಿಸಿದೆ. ಆದರೆ ಚಾಮರಾಜಪೇಟೆಯ ನರ್ಸರಿ ಸ್ಕೂಲ್ ಒಂದು ತರಗತಿ ನಡೆಸುತ್ತಿದೆ.
ಚಾಮರಾಜಪೇಟೆಯ ದಿ ಚೈಲ್ಡ್ ಕಿಂಗಡಮ್ ಸ್ಕೂಲ್‍ಗೆ ಬೀಗ ಹಾಕಿ ಪುಟಾಣಿ ಮಕ್ಕಳಿಗೆ ಕ್ಲಾಸ್ ತೆಗೆದುಕೊಳ್ಳಲಾಗುತ್ತಿದೆ. ಈ ಕುರಿತು ವರದಿ ಮಾಡಲು ಪಬ್ಲಿಕ್ ಟಿವಿ ಹೋದಾಗ ಕ್ಯಾಮೆರಾ ನೋಡಿದ ಕೂಡಲೇ ಶಿಕ್ಷಕಿಯೊಬ್ಬರು ಮಕ್ಕಳನ್ನು ತರಗತಿಯೊಳಗೆ ಒಳ ಕಳಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಶಿಕ್ಷಕಿಯೊಬ್ಬರು, ನಾವು ತರಗತಿ ಕ್ಲೋಸ್ ಮಾಡಲ್ಲ. ನೀವ್ಯಾರು ಇದನ್ನು ಕೇಳೋಕೆ? ನೀವು ಮೀಡಿಯಾದವರೆ ಸಮಸ್ಯೆ ಮಾಡ್ತಿರೋದು. ಸರ್ಕಾರದ ಆದೇಶ ನಮ್ಗೆ ಗೊತ್ತಿದೆ ಎಂದು ರೇಗಾಡಿದರು. ಬಳಿಕ ರಿಪೋರ್ಟ್ ಕಾರ್ಡ್ ಕೊಡೋದಕ್ಕೆ ನರ್ಸರಿ ಸ್ಕೂಲ್ ಅನ್ನು ತೆರೆದಿದ್ದೇವೆ. ಸ್ಕೂಲ್ ಮಕ್ಕಳಿಗೆ ರಿಪೋರ್ಟ್ ಕಾರ್ಡ್ ಮುಖ್ಯ ಅಲ್ವಾ ಅಂತ ಕಥೆ ಹೇಳಿದರು.
ಪಬ್ಲಿಕ್ ಟಿವಿಯ ಮಾಹಿತಿ ಸಿಗುತ್ತಿದ್ದಂತೆ ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದರು. ಆದರೆ ಶಾಲಾ ಆಡಳಿತ ಮಂಡಳಿಯು ಅವರನ್ನು ಶಾಲೆಯ ಅವರಣದೊಳಗೆ ಬಿಡಲೇ ಇಲ್ಲ.
ಸರ್ಕಾರದ ಆದೇಶದಲ್ಲಿ ಏನಿದೆ?
ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಾರ್ಚ್ 8ರಂದು ಟ್ವೀಟ್ ಮಾಡಿ, ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಬಿಬಿಎಂಪಿ, ಬೆಂಗಳೂರುನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಮುಂದಿನ ಆದೇಶದವರೆಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದರು.
1-9ನೇ ತರಗತಿವರೆಗಿನ ಪರೀಕ್ಷೆ ಶೀಘ್ರವೇ ಮುಗಿಸಿ ಶಾಲೆಗಳಿಗೆ ರಜೆ ಘೋಷಣೆ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದೆ. 1-5 ನೇ ತರಗತಿ ಮಾರ್ಚ್ 11ರಿಂದ 16ವರೆಗೆ ಪರೀಕ್ಷೆ ಮುಗಿಸಬೇಕು. 6-9 ನೇ ತರಗತಿ- ಮಾರ್ಚ್ 23 ರ ಒಳಗೆ ಮುಗಿಸಬೇಕು. 10 ನೇ ತರಗತಿ ಮೊದಲೇ ನಿಗದಿ ಪಡಿಸಿದ ವೇಳಾಪಟ್ಟಿಯಂತೆ ಮುಗಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.
ಆರೋಗ್ಯ ಆಯುಕ್ತರ ಸಲಹೆ ಮೇರೆಗೆ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲೆಗಳ LKG, UJG ಶಾಲೆಗಳಿಗೆ ನಾಳೆಯಿಂದ ರಜೆ ಘೋಷಿಸಲಾಗಿದೆ.
— S.Suresh Kumar (@nimmasuresh) March 8, 2020
ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಪ್ರೀ ನರ್ಸರಿ, ಎಲ್‍ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ರಜೆ ಘೋಷಣೆಯಾದ ಬೆನ್ನಲ್ಲೇ ಅಂಗನವಾಡಿಗಳಿಗೂ ರಜೆ ನೀಡಿ ಆದೇಶಿಸಲಾಗಿತ್ತು. ದಿನಾಂಕ 10-03-2020 ರಿಂದ 17-03-2020ರವರೆ ಅಂಗನವಾಡಿಗಳಿಗೆ ರಜೆ ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಧರಿಸಿ ಸುತ್ತೋಲೆ ಹೊರಡಿಸಿದೆ.