CoronaKarnatakaKodaguLatestMain Post

ಬಿಡುವಿದ್ದಾಗ ಮಾಸ್ಕ್ ತಯಾರಿಸಿ ಗ್ರಾಮೀಣ ಜನರಿಗೆ ವಿತರಿಸ್ತಿದ್ದಾರೆ ಅಂಗನವಾಡಿ ಶಿಕ್ಷಕಿಯರು

– ಕೊರೊನಾ ಕೆಲಸದ ಮಧ್ಯೆಯೂ ಜನರಿಗೆ ಸಹಾಯ
– ಬಿಡುವಿದ್ದಾಗಲೆಲ್ಲ ಮಾಸ್ಕ್ ಹೊಲಿಯುವ ಶಿಕ್ಷಕಿಯರು

ಮಡಿಕೇರಿ: ಕೊರೊನಾ ವೈರಸ್ ನಿಯಂತ್ರಿಸಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದ್ದು, ಇದರ ಭಾಗವಾಗಿ ಆಶಾ ಕಾರ್ಯಕರ್ತೆಯರು ಸಹ ಟೆಸ್ಟಿಂಗ್ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಇಲ್ಲೊಂದಿಷ್ಟು ಅಂಗನವಾಡಿ ಕಾರ್ಯಕರ್ತರು ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ.

ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಬಾಡಗ ಗ್ರಾಮದ ಅಂಗನವಾಡಿ ಶಿಕ್ಷಕಿ ಜಯಂತಿ ಸೇರಿದಂತೆ ನಾಲ್ಕೈದು ಅಂಗನವಾಡಿಗಳ ಶಿಕ್ಷಕಿಯರು ಕೊರೊನಾ ನಿಯಂತ್ರಣಕ್ಕೆ ಸಹಾಯ ಮಾಡುತ್ತಿದ್ದು, ಮಾಸ್ಕ್ ಹೊಲೆದು ಗ್ರಾಮೀಣ ಭಾಗದ ಜನರಿಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಮಾಸ್ಕ್ ಹೊಲೆಯುವ ಕಾರ್ಯ ಮಾಡುತ್ತಿದ್ದು, ಗ್ರಾಮೀಣ ಭಾಗದ ಜನರಿಗೆ ಕೊರೊನಾ ಹರಡಬಾರದು ಎಂಬ ಉದ್ದೇಶದಿಂದ ಉಚಿತವಾಗಿ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ. ಈಗಾಗಲೇ 150ಕ್ಕೂ ಹೆಚ್ಚು ಮಾಸ್ಕ್ ಗಳನ್ನು ಹೊಲೆದು ಬಡ ಜನರಿಗೆ ನೀಡಿದ್ದಾರೆ.

ಈ ಶಿಕ್ಷಕಿಯರು ಕೂಡ ಸರ್ಕಾರ ವಹಿಸಿದ ಕೊರೊನಾ ಸಂಬಂಧಿ ಕೆಲಸ ಮಾಡುತ್ತಿದ್ದು, ಮಧ್ಯಾಹ್ನದವರೆಗೆ ಕೆಲಸ ಮಾಡಿ ಬಿಡುವಿನ ವೇಳೆಯಲ್ಲಿ ಮಾಸ್ಕ್ ಹೊಲಿಯುತ್ತಿದ್ದಾರೆ. ಕೊರೊನಾ ಕೆಲಸಕ್ಕೆ ತೆರಳಿದಾಗ ಯಾವ ಗ್ರಾಮಗಳಲ್ಲಿ ಬಡ ಜನರು ಮಾಸ್ಕ್ ಧರಿಸಿರುವುದಿಲ್ಲವೋ ಅವರನ್ನು ಗಮನಿಸಿ ಅಂತಹವರಿಗೆ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ.

ಗ್ರಾಮೀಣ ಭಾಗದ ಜನರಿಗೆ ಹಣ ನೀಡಿ ಮಾಸ್ಕ್ ಕೊಂಡು ಧರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಅವರು ಮಾಸ್ಕ್ ಧರಿಸದೆಯೇ ಓಡಾಡುತ್ತಿದ್ದಾರೆ. ಇಂತಹವರಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡುತ್ತಿದ್ದೇವೆ. ಜೊತೆಗೆ ಕೊರೊನಾ ಕುರಿತು ಜನರಿಗೆ ಮಾಹಿತಿ ನೀಡುತ್ತಿದ್ದೇವೆ ಎಂದು ಶಿಕ್ಷಿಯೊಬ್ಬರು ತಿಳಿಸಿದ್ದಾರೆ. ಸಾಕಷ್ಟು ಸಂಘ ಸಂಸ್ಥೆಗಳು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿವೆ. ಈ ಶಿಕ್ಷಕಿಯರು ಸಹ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

Back to top button