ಮಡಿಕೇರಿ: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದಾರೆ. ಇದೀಗ ಕೊರೊನಾ ವೈರಸ್‍ನ ಬಗ್ಗೆ ಭಾರತ ಉತ್ತಮ ರೀತಿಯಲ್ಲಿ ಸಾಧನೆ ಮಾಡುತ್ತಿದೆ ಎಂದು ಅಮೆರಿಕದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಕೊಡಗು ಮೂಲದ ಕಾರ್ಯಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜನರು ಸ್ವಲ್ಪ ಸಪೋರ್ಟ್ ಮಾಡಿದರೆ ಈ ಮಹಾಮಾರಿ ಕೊರೊನಾ ವೈರಸ್ ಅನ್ನು ಮಟ್ಟಹಾಕಬಹುದು ಎಂದು ಜನರಿಗೆ ಕಿವಿಮಾತು ಹೇಳಿದ್ದಾರೆ. ದೇಶದ ಆರ್ಥಿಕ ಮಟ್ಟ ಮತ್ತು ಕುಟುಂಬಗಳನ್ನು ಕೊರೊನಾ ನಾಶಮಾಡಿದೆ. ಆದರೆ ಅಮೆರಿಕ ಮತ್ತು ಯೂರೋಪ್ ದೇಶಗಳಿಗೆ ಹೋಲಿಸಿದರೆ ಭಾರತ ಉತ್ತಮವಾಗಿದೆ. ಇಂತಹ ಸಂದರ್ಭದಲ್ಲಿ ಪ್ರಮುಖವಾದ ಕ್ರಮದ ಅಗತ್ಯವಿದೆ. ಅದಕ್ಕಾಗಿ ದೇಶವನ್ನು ಲಾಕ್‍ಡೌನ್ ಮಾಡಲಾಗಿದೆ. ಇದಕ್ಕಾಗಿ ಜನರು ಮನೆಯಲ್ಲೇ ಇರಿ, ಆರೋಗ್ಯವಾಗಿರಿ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದ್ದಾರೆ.
ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಹೋದಾಗ 6 ಅಡಿ ಅಂತರ ಕಾಯ್ದುಕೊಳ್ಳಿ. ಮನೆಯಲ್ಲೇ ಇರುವಾಗ ಶ್ವಾಶಕೋಶದ ಸಾಮರ್ಥ್ಯ ಹೆಚ್ಚಿಸುವ ವ್ಯಾಯಾಮ ಮಾಡಿ. ಕೆಲವು ದಿನಗಳು ಈ ರೀತಿ ಮಾಡಿದರೆ ಕೊರೊನಾ ವೈರಸ್ ದೇಶದಲ್ಲಿ ಕಡಿಮೆಯಾಗುತ್ತದೆ ಎಂದು ಅಮೆರಿಕದಿಂದ ಕೊಡಗಿನ ಜನತೆಗೆ ವಿಡಿಯೋ ಸಂದೇಶ ಕಳಿಸಿದ್ದಾರೆ.
ಕಾರ್ಯಪ್ಪ ಅವರು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ಪುತ್ರರಾಗಿದ್ದಾರೆ. ಸದ್ಯಕ್ಕೆ ಇವರು ಅಮೆರಿಕದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.