ಬೆಂಗಳೂರು: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂದು ಹೊಸ 7 ಕೇಸ್ ಪತ್ತೆಯಾದ ಹಿನ್ನೆಲೆ ಕರ್ನಾಟಕದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 33ಕ್ಕೆ ಏರಿದೆ. ಹೀಗಾಗಿ ರಾಜ್ಯದ ಬೆಂಗಳೂರು ಸೇರಿ 9 ಜಿಲ್ಲೆಗಳಲ್ಲಿ ಕರ್ಫ್ಯೂ ಮಾದರಿಯಲ್ಲಿ ಲಾಕ್‍ಡೌನ್ ಮಾಡಲಾಗಿದೆ.
ಕಳೆದ ದಿನವೇ ಬೆಂಗಳೂರನ್ನು ಲಾಕ್‍ಡೌನ್ ಮಾಡಲಾಗಿತ್ತು. ಆದರೆ ಇಂದು ಅತೀ ಹೆಚ್ಚು ಕೊರೊನಾ ಕೇಸ್‍ಗಳು ಪತ್ತೆ ಆಗಿರುವ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‍ಗಳು ಎಂದಿನಂತೆ ಓಡಾಡುತ್ತಿದ್ದವು. ಆಟೋ, ಟ್ಯಾಕ್ಸಿಗಳ ಸಂಚಾರವೂ ಎಂದಿನಂತೆ ಇತ್ತು. ಬಹುತೇಕ ಕಡೆ ಅಂಗಡಿ ಮುಂಗಟ್ಟು ತೆರೆದಿತ್ತು. ಸರ್ಕಾರಿ ಕಚೇರಿಗಳನ್ನು ಓಪನ್ ಮಾಡಲಾಗಿತ್ತು.
Advertisement
ಈ ಬಗ್ಗೆ ಪ್ರಧಾನಿ ಮೋದಿ ಬೇಸರ ವ್ಯಕ್ತಪಡಿಸಿದ ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿತ್ತು. ತಕ್ಷಣ ಮಧ್ಯಾಹ್ನ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, ತಜ್ಞರ ಸಲಹೆಯನ್ನು ಮೀರಿ ಇಡೀ ರಾಜ್ಯವನ್ನು ಲಾಕ್‍ಡೌನ್ ಮಾಡದೇ, ಅರ್ಧಂಬರ್ಧ ಕರ್ಫ್ಯೂ ತೀರ್ಮಾನ ಕೈಗೊಂಡರು. ಮತ್ತದೇ ಕೊರೊನಾ ಪೀಡಿತ 9 ಜಿಲ್ಲೆಗಳಿಗೆ ಅನ್ವಯವಾಗುವಂತೆ ತಕ್ಷಣದಿಂದಲೇ ಜಾರಿ ಆಗುವಂತೆ ರಾಜ್ಯ ಸರ್ಕಾರ ಹಲವು ಕ್ರಮ ಕೈಗೊಂಡಿದೆ.
Advertisement
ಬೆಂಗಳೂರು ಸೇರಿ 9 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದ್ದು, ಏಪ್ರಿಲ್ 1 ರವರೆಗೂ ಜಿಲ್ಲೆಗಳು ಲಾಕ್‍ಡೌನ್ ಆಗಲಿವೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಬಳ್ಳಾಪುರ, ಮೈಸೂರು, ಕಲಬುರ್ಗಿ, ಕೊಡಗು, ಧಾರವಾಡ ಜಿಲ್ಲೆಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.
Advertisement
ಕರ್ನಾಟಕದಲ್ಲಿ ಇದುವರೆಗೆ ಒಟ್ಟು 33 ವ್ಯಕ್ತಿಗಳಿಗೆ #COVIDー19 ಸೋಂಕು ಖಚಿತವಾಗಿದೆ. ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ಬಿಡುಗಡೆ ಮಾಡುವವರೆಗೂ ಸಂಖ್ಯೆಯನ್ನು ಖಚಿತಪಡಿಸಲು ಸಾಧ್ಯವಾಗುವುದಿಲ್ಲ. ನಾಗರಿಕರು ಗೊಂದಲಕ್ಕೀಡಾಗಬಾರದು ಎಂದು ಈ ಕ್ರಮ ಕೈಗೊಳ್ಳಲಾಗಿದೆ. #IndiaFightsCoronavirus
— B Sriramulu (@sriramulubjp) March 23, 2020
Advertisement
9 ಜಿಲ್ಲೆಗಳಲ್ಲಿ ಏನಿರಲ್ಲ:
* ನಾಳೆಯಿಂದ ಕೆಎಸ್ಆರ್‌ಟಿಸಿ, ಬಿಎಂಟಿಸಿ ಸಂಚಾರ ರದ್ದು (9 ಜಿಲ್ಲೆಗಳಿಂದ ಇತರೆ ಜಿಲ್ಲೆ ಸಂಪರ್ಕಿಸುವ ಸಾರಿಗೆ ಬಂದ್)
* ಖಾಸಗಿ ಬಸ್‍ಗಳು, ಆಟೋ-ಕ್ಯಾಬ್, ಟ್ಯಾಕ್ಸಿಗಳ ಓಡಾಡಲ್ಲ..!
* ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇವೆ ಇರಲ್ಲ
* ಅಂಗಡಿ, ಮಾರ್ಕೆಟ್, ಹೋಟೆಲ್ ಬಂದ್
* ಎಂಆರ್‌ಪಿ ಶಾಪ್, ಬಾರ್ & ರೆಸ್ಟೋರೆಂಟ್ ಬಂದ್
* ದೇವಸ್ಥಾನ ಬಂದ್, ಧಾರ್ಮಿಕ ಆಚರಣೆಗಳಿಗೆ ನಿಷೇಧ (ಬೆಂಗಳೂರು ಕರಗ ಸೇರಿ)
* ಗೃಹಬಂಧನದಲ್ಲಿ ಇರುವವರು ಹೊರ ಬಂದರೆ ಕ್ರಿಮಿನಲ್ ಕೇಸ್, ಜೈಲು ಶಿಕ್ಷೆ (ಹೋಂ ಕ್ವಾರಂಟೈನ್ ಮೇಲೆ ಖಾಕಿ ನಿಗಾ)
* ಗಾರ್ಮೆಂಟ್ಸ್, ಕಾರ್ಖಾನೆ ಬಂದ್ (ವೇತನ ಸಹಿತ ರಜೆ ನೀಡಬೇಕು)
* ದಿನಗೂಲಿ ನೌಕರರಿಗೆ ಸರ್ಕಾರದಿಂದಲೇ ಆಹಾರದ ವ್ಯವಸ್ಥೆ
* ಕರ್ಫ್ಯೂ ಆದೇಶ ಉಲ್ಲಂಘಿಸಿದ್ರೆ 2 ವರ್ಷ ಜೈಲು (ಐಪಿಸಿ ಸೆಕ್ಷನ್ 270(ಸೋಂಕು ಹರಡುವವರ ವಿರುದ್ಧದ ಕೇಸ್)ರ ಅಡಿಯಲ್ಲಿ ಕೇಸ್)
* ಸರ್ಕಾರಿ ಮತ್ತು ಸರ್ಕಾರೇತರ ಇಲಾಖೆಗಳ ಅಗತ್ಯ ಸೇವೆ ಮಾತ್ರ ಲಭ್ಯ
* 50 ವರ್ಷ ಮೇಲ್ಪಟ್ಟ ಸರ್ಕಾರಿ ಉದ್ಯೋಗಿಗಳಿಗೆ ಕಡ್ಡಾಯ ರಜೆ
* ಮಾರಣಾಂತಿಕ ರೋಗಗಳಿಂದ ಬಳಲುತ್ತಿರುವ ಉದ್ಯೋಗಿಗಳಿಗೂ ರಜೆ
9 ಜಿಲ್ಲೆಗಳಲ್ಲಿ ಏನೇನು ಇರುತ್ತೆ:
* ಪಡಿತರ ಅಂಗಡಿಗಳು, ದಿನಸಿ ಅಂಗಡಿಗಳು, ಹಾಲು, ತರಕಾರಿ, ಮಾಂಸ, ಮೀನು, ಹಣ್ಣುಗಳು, ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳು ಮತ್ತು ಅಂಗಡಿಗಳ ಸೇವೆ ಲಭ್ಯ.
* ಪೆಟ್ರೋಲ್ ಬಂಕ್, ಎಲ್ ಪಿಜಿ ಗ್ಯಾಸ್ ಕೇಂದ್ರಗಳು, ಆಯಿಲ್ ಏಜೆನ್ಸಿಗಳು ಮತ್ತು ಸಂಬಂಧಿತ ಗೋದಾಮುಗಳು, ಎಲ್ಲ ರೀತಿಯ ಸರಕು ಸಾಗಣೆ ಸೇವೆಗಳು ಲಭ್ಯ.
* ಆಸ್ಪತ್ರೆಗಳು, ಕ್ಲಿನಿಕ್ ಗಳು, ಮೆಡಿಕಲ್ ಶಾಪ್‍ಗಳು, ಆಪ್ಟಿಕಲ್ ಸ್ಟೋರ್‌ಗಳು, ಡಯಾಗ್ನೋಸ್ಟಿಕ್ ಕೇಂದ್ರಗಳು, ಇತರೇ ಆರೋಗ್ಯ ಮತ್ತು ವೈದ್ಯಕೀಯ ಸಂಬಂಧಿತ ಕೇಂದ್ರಗಳು, ಗೋದಾಮುಗಳು ಮತ್ತು ಕಾರ್ಖಾನೆಗಳ ಸೇವೆ ಲಭ್ಯ.
* ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸೇವೆಗಳು ಲಭ್ಯ.
* ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಇಲಾಖೆ ಕಚೇರಿಗಳು ಮತ್ತು ಅಂಚೆ ಸೇವೆಗಳು ಲಭ್ಯ.
* ಅಗತ್ಯ ಸೇವೆಗಳನ್ನು ನಿರ್ವಹಿಸುವ ಸರ್ಕಾರಿ ಕಚೇರಿಗಳು ತೆರೆದಿರುತ್ತವೆ.
* ವಿದ್ಯುತ್, ನೀರು ಮತ್ತು ಇತರೇ ಪೌರ ಸೇವೆಗಳು ಲಭ್ಯ.
* ಬ್ಯಾಂಕ್ ಸೇವೆಗಳು, ಎಟುಎಂ ಕೇಂದ್ರಗಳು, ಟೆಲಿಕಾಂ ಕೇಂದ್ರಗಳು, ಇಂಟರ್ನೆಟ್ ಮತ್ತು ಕೇಬಲ್ ಸೇವೆಗಳು ಲಭ್ಯ.
* ಇ ಕಾಮರ್ಸ್ ಅಥವಾ ಆನ್ ಲೈನ್ ಮೂಲಕ ಹೋಂ ಡೆಲಿವರಿ ಸೇವೆಗಳು, ರೆಸ್ಟೋರೆಂಟ್ ಹೋಂ ಡೆಲಿವರಿ ಸೇವೆಗಳು ಲಭ್ಯ.
* ಸರ್ಕಾರದ ಕ್ಯಾಂಟೀನ್ ಸೇವೆಗಳು ಲಭ್ಯ.
* ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳ ಸೇವೆ ಲಭ್ಯ
* ಖಾಸಗಿ ಭದ್ರತಾ ಸೇವೆಗಳು ಲಭ್ಯ.