ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಪತಂಜಲಿ ನೌಕಾನೆಲೆ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ ನಾಲ್ವರು ಗುಣಮುಖರಾಗಿದ್ದು, ಇಂದು ಅವರನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್‍ಕುಮಾರ್ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಭಟ್ಕಳ ಮೂಲದ ಎಂಟು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ತಕ್ಷಣ ಜಿಲ್ಲಾಡಳಿತ ಅವರಿಗೆ ಭಟ್ಕಳ ತಾಲೂಕು ಆಸ್ಪತ್ರೆಯಿಂದ ಕಾರವಾರ ತಾಲೂಕಿನ ಕದಂಬ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು.
ಎಂಟು ಜನ ಸೋಂಕಿತರಲ್ಲಿ ಈಗಾಗಲೇ ಚಿಕಿತ್ಸೆ ಪಡೆದು ಇಬ್ಬರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು. ಇಂದು ಮತ್ತೆ ನಾಲ್ವರು ಗುಣಮುಖರಾಗಿ ಡಿಸ್ಚಾರ್ಜ್ ಆಗಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಳಿದ ಇಬ್ಬರು ಸಹ ಒಂದೆರಡು ದಿನದಲ್ಲಿ ಗುಣಮುಖರಾಗಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಇತ್ತೀಚೆಗೆ ಕೊರೊನಾ ಪತ್ತೆಯಾದ ಗರ್ಭಿಣಿಗೆ ಉಡುಪಿಯಲ್ಲಿ ಚಿಕಿತ್ಸೆ ಕೊಡುತ್ತಿರುವುದರಿಂದ ಜಿಲ್ಲೆಯಲ್ಲಿರುವ ಬಹುತೇಕ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಇದಲ್ಲದೇ ಈ ಮಹಿಳೆಯ ಆರೋಗ್ಯ ಸಹ ಸುಧಾರಿಸಿದೆ ಎಂಬ ಮಾಹಿತಿ ಸಹ ಬಂದಿದೆ. ಜಿಲ್ಲೆಯಲ್ಲಿ ಒಟ್ಟು 9 ಜನ ಕೊರೊನಾ ಸೋಂಕಿತರಲ್ಲಿ ಆರು ಜನರು ಚೇತರಿಸಿಕೊಂಡಿದ್ದು, ಜಿಲ್ಲೆಯ ಜನರಲ್ಲಿ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.
ಗುಣಮುಖರಾದವರಿಗೆ ಪ್ರತ್ತೇಕ ಕ್ವಾರಂಟೈನ್:
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 9 ಜನ ಕೊರೊನಾ ಸೋಂಕಿತರು ದಾಖಲಾಗಿದ್ದರು. ಇವರಲ್ಲಿ ಮೊದಲ ಹಂತದಲ್ಲಿ ಇಬ್ಬರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾಜ್ ಆಗಿ ಭಟ್ಕಳದ ಹೋಟಲ್‍ವೊಂದರಲ್ಲಿ 14 ದಿನಗಳವರೆಗೆ ಕ್ವಾರಂಟೈನ್ ಮಾಡಲಾಗುತ್ತಿದೆ. ಪ್ರತಿ ದಿನ ಇವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಇಂದು ಡಿಸ್ಚಾರ್ಜ್ ಆಗುವ ನಾಲ್ಕು ಜನರನ್ನು ಕೂಡ 14 ದಿನ ಕ್ವಾರಂಟೈನ್ ಮಾಡಲಾಗುತ್ತದೆ.