-7 ತಿಂಗಳ ಸಂಬಳ ನೀಡಲು ಇಲಾಖೆ ಬಜೆಟ್ ಕೊರತೆ
ರಾಯಚೂರು: ಕೋವಿಡ್ ಮೂರನೇ ಅಲೆಯ ಆತಂಕ ಈಗ ಎಲ್ಲೆಡೆ ಮತ್ತೇ ಹೆಚ್ಚಾಗುತ್ತಿದೆ. ಕೋವಿಡ್ ಪ್ರಕರಣಗಳು ಕೂಡ ಅಲ್ಲಲ್ಲಿ ಪತ್ತೆಯಾಗಲು ಶುರುವಾಗಿದೆ. ಆದರೆ ಕೋವಿಡ್ ಎರಡನೇ ಅಲೆಯಲ್ಲಿ ಪ್ರಾಣವನ್ನು ಒತ್ತೆಯಿಟ್ಟು ದುಡಿದ ಡಿ ಗ್ರೂಪ್ ನೌಕರರಿಗೆ 7 ತಿಂಗಳಾದ್ರೂ ಸಂಬಳವಿಲ್ಲ. ಮೊಸಳೆ ಕಣ್ಣಿನ ಸರ್ಕಾರದ ವರ್ತನೆಗೆ ರಾಯಚೂರು ಸೇರಿ ರಾಜ್ಯದ ಸಾವಿರಾರು ಬಡ ನೌಕರರು ಊಟಕ್ಕೂ ತೊಂದರೆ ಪಡುವಂತಾಗಿದೆ.
ಕೋವಿಡ್ ಸಮಯದಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಡಿ ಗ್ರೂಪ್ ನೌಕರರಿಗೆ ಈ ವರೆಗೂ ಸನ್ಮಾನ ಬಿಟ್ಟರೆ ಸಂಬಳ ಅಂತ ಬಿಡಿಗಾಸು ಸಿಕ್ಕಿಲ್ಲ. ರಾಯಚೂರು ಜಿಲ್ಲೆಯಲ್ಲಿ 80 ಜನರನ್ನು ನೇಮಕ ಮಾಡಿಕೊಂಡು ರಿಮ್ಸ್ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಸಿಬ್ಬಂದಿ ನೇಮಕ ಮಾಡಲಾಗಿತ್ತು. ಇದೀಗ ಏಳು ತಿಂಗಳಾದರೂ ಒಂದು ತಿಂಗಳ ಸಂಬಳವನ್ನೂ ನೀಡಿಲ್ಲ. ಹೆಸರಿಗೆ ಕೋವಿಡ್ ವಾರಿಯರ್ಸ್ ಅಂತ ಕರೆದ ಸರ್ಕಾರ ಸಂಬಳ ಕೊಡದೆ ಸತಾಯಿಸುತ್ತಿದೆ. ರಾಯಚೂರು ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಜನ ಸಂಬಳವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ಹೊಸ ವೈರಸ್ B.1.1.529 ಪತ್ತೆ – ಭಾರತದಲ್ಲಿ ಆತಂಕ
ಕೋವಿಡ್ ಸಮಯದಲ್ಲಿ ಪ್ರಾಣ ಒತ್ತೆಯುಟ್ಟು ಟಾರ್ಗೆಟ್ ಒತ್ತಡದಲ್ಲಿ ಕೆಲಸ ಮಾಡಿದ ಸಿಬ್ಬಂದಿ ಈಗ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ತಲುಪಿದ್ದಾರೆ. ಕಳೆದ ಏಳುತಿಂಗಳಿಂದ ತಮ್ಮ ಸ್ವಂತ ಖರ್ಚಿನಲ್ಲೇ ಓಡಾಡಿಕೊಂಡು ದುಡಿಯುತ್ತಿದ್ದಾರೆ. ಎಆರ್‍ಸಿ ಕಡೆಯಿಂದ ನೇಮಕ ಮಾಡಿಕೊಳ್ಳಲಾದ ಸಿಬ್ಬಂದಿಗೆ ಬಜೆಟ್ ಕೊರತೆ ಕಾರಣ ಹೇಳಿ ಸಂಬಳ ಕೊಡದೆ ಸತಾಯಿಸುತ್ತಿದ್ದಾರೆ. ಕೋವಿಡ್ ರಿಸ್ಕ್ ಅಲೊಯನ್ಸ್ ನೀಡುವುದಾಗಿ ಸರ್ಕಾರ ಹೇಳಿತ್ತು, ಆದರೆ ಅದನ್ನು ಪೂರ್ಣಾವಧಿ ನೌಕರರಿಗೆ ಹಾಕಿ ಗುತ್ತಿಗೆ ನೌಕರರನ್ನು ಕಡೆಗಣಿಸಲಾಗಿದೆ. ಹೀಗಾಗಿ ನೌಕರರು ಸಂಬಳಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಇನ್ನೂ ಅಧಿಕಾರಿಗಳು ಮಾತ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ ಎನ್ನುತ್ತಿದ್ದಾರೆ. ಅನುದಾನ ಕೊರತೆಯಿದೆ, ಒಂದೆರಡು ಜಿಲ್ಲೆಯಲ್ಲಿ ಸಂಬಳ ಕೊಟ್ಟಿರಬಹುದು ಬಹುತೇಕ ಜಿಲ್ಲೆಗಳಿಗೆ ಹಣ ಬಿಡುಗಡೆಯಾಗಿಲ್ಲ. ಅನುದಾನದ ಪ್ರಸ್ತಾವನೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಅಂತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಹೇಳಿದ್ದಾರೆ. ಇದನ್ನೂ ಓದಿ: ಪೆನ್ಸಿಲ್ ನಿಬ್ ಕದ್ದ ಬಾಲಕನ ವಿರುದ್ಧ ದೂರು ದಾಖಲಿಸಲು ಠಾಣೆಗೆ ಹೋದ ಪುಟಾಣಿ
ಒಟ್ನಲ್ಲಿ, ಕೋವಿಡ್ ಸಮಯದಲ್ಲಿ ಡಿ ಗ್ರೂಪ್ ನೌಕರರನ್ನೂ ದೇವರಂತೆ ಬಿಂಬಿಸಿದ ಸರ್ಕಾರ ಈಗ ಅವರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಕಷ್ಟ ಕಾಲದಲ್ಲಿ ದುಡಿದವರು ಈಗ ಸಂಬಳವಿಲ್ಲದೆ ಕಷ್ಟ ಎದುರಿಸುತ್ತಿದ್ದಾರೆ. ಈಗಲಾದ್ರೂ ಸರ್ಕಾರ ಎಚ್ಚೆತ್ತು ಸಿಬ್ಬಂದಿ ಸಂಬಳ ಬಿಡುಗಡೆ ಮಾಡಬೇಕಿದೆ.