ಉಡುಪಿ: ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಶಂಕಿತ ಕೊರೊನಾ ರೋಗಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ ರಾತ್ರಿಯಿಂದಲೇ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಲಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುನಿಯಾಲು ಗ್ರಾಮದ 75 ವರ್ಷದ ವ್ಯಕ್ತಿ ಇಸ್ರೇಲ್ ಪ್ರವಾಸ ಮುಗಿಸಿ ಬುಧವಾರವಷ್ಟೇ ಬಂದಿದ್ದರು. ಊರಿಗೆ ವಾಪಸ್ಸಾದ ನಂತರ ಅವರಲ್ಲಿ ಶೀತ, ಕೆಮ್ಮು ಕಾಣಿಸಿಕೊಂಡಿತ್ತು. ಈ ಬಗ್ಗೆ ಮಾಹಿತಿ ಪಡೆದ ಆರೋಗ್ಯ ಇಲಾಖೆ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಐಸೋಲೇಟೆಡ್ ವಾರ್ಡ್ ಗೆ ದಾಖಲಿಸಿದೆ.
ಆ ವ್ಯಕ್ತಿ ಮೂಲತ: ಕೇರಳದವರಾಗಿದ್ದು, 75 ವರ್ಷ ವಯಸ್ಸಾಗಿದೆ. ಇಸ್ರೇಲ್ ಪ್ರವಾಸ ಪೂರೈಸಿ ಬಂದ ನಂತರ ವಯೋ ಸಹಜ ಸುಸ್ತು ಹಾಗೂ ಶೀತದಿಂದ ಬಳಲುತ್ತಿದ್ದರು. ಹಾಗಾಗಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ದಾಖಲಾಗುವ ವೇಳೆಗಿಂತ ಈ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂಬ ಮಾಹಿತಿಯಿದೆ.
ಗಂಟಲಿನ ದ್ರವವನ್ನು ಹೆಚ್ಚಿನ ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ಶುಕ್ರವಾರ ಅಥವಾ ಶನಿವಾರ ಇದರ ವರದಿ ಬರಲಿದ್ದು ಬಳಿಕವಷ್ಟೇ ಇವರಿಗೆ ಕೊರೊನಾ ಸೋಂಕು ಇದೆಯೋ ಇಲ್ಲವೋ ಗೊತ್ತಾಗಲಿದೆ. ಕೃಷಿಕನಾಗಿರುವ ವ್ಯಕ್ತಿಯನ್ನು ಮನೆಯಿಂದಲೇ ಆಸ್ಪತ್ರೆಗೆ ವೈದ್ಯರು ಸರ್ಕಾರಿ ಆಂಬುಲೆನ್ಸ್ ಮೂಲಕ ಕರೆದುಕೊಂಡು ಬಂದಿದ್ದಾರೆ. ಸದ್ಯ ಜ್ವರ ಮತ್ತು ಶೀತ ಗುಣಮುಖವಾಗುವ ಚಿಕಿತ್ಸೆ ನೀಡಲಾಗುತ್ತಿದೆ.