ಉಡುಪಿ: ಸರ್ಕಾರ ಮೀನುಗಾರಿಕೆಗೆ ಅಸ್ತು ಅಂದಿದ್ದೇ ತಡ ಉಡುಪಿ ಜಿಲ್ಲೆಯಲ್ಲಿ ನಾಡದೋಣಿ ಮೀನುಗಾರಿಕೆ ಆರಂಭವಾಗಿದೆ. ಇಂದು ಕಡಲಿಗಿಳಿದ ಮೀನುಗಾರರು ಕಸುಬು ಮಾಡಿ ದಡಕ್ಕೆ ವಾಪಸ್ಸಾದರು. ಬುಟ್ಟಿಯಲ್ಲಿ ಮೀನು ಹೊತ್ತು ತಂದು ಸ್ಥಗಿತಗೊಂಡಿದ್ದ ಕಸುಬಿನ ಜೊತೆ ಜೀವನವನ್ನು ಆರಂಭಿಸಿದರು.
ಕಿಲ್ಲರ್ ಕೊರೊನಾಗೆ ಬೆಚ್ಚಿ ಬಿದ್ದಿರುವ ಭಾರತ 22 ದಿನಗಳಿಂದ ಸ್ತಬ್ಧವಾಗಿತ್ತು. ಜನ ರಸ್ತೆಗಿಳಿಯದೇ ಮನೆಯೊಳಗೆ ಅವಿತು ಕುಳಿತಿದ್ದರು. ಸದಾ ಸಾವಿನ ಜೊತೆ ಸರಸವಾಡುವ ಮೊಗವೀರರು ಕೊರೊನಾ ಭಯದಿಂದ ಕಡಲಿಗೆ ಇಳಿದಿರಲಿಲ್ಲ. ಮೀನುಗಾರಿಕೆಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿನಾಯಿತಿ ಕೊಟ್ಟ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ನಾಡದೋಣಿ ಮೀನುಗಾರಿಕೆ ಭರ್ಜರಿಯಾಗಿ ಆರಂಭವಾಗಿದೆ. ಸೂರ್ಯ ಹುಟ್ಟುವ ಮೊದಲೇ ಮೀನುಗಾರರು ಸಮುದ್ರಕ್ಕಿಳಿದು ಒಂದೆರಡು ಸಾವಿರ ರೂಪಾಯಿಯ ಮೀನನ್ನು ಬಲೆ ಹಾಕಿ ಹಿಡಿದು ವಾಪಸ್ಸಾಗಿದ್ದಾರೆ. ಸರ್ಕಾರದ ನಿಯಮದಂತೆ ಒಂದೊಂದು ದೋಣಿಯಲ್ಲಿ ಐದು ಜನಕ್ಕಿಂತ ಕಡಿಮೆ ಇರುವಂತೆ ನೋಡಿಕೊಂಡು ಕಸುಬನ್ನು ಆರಂಭಿಸಿದ್ದಾರೆ.
Advertisement
Advertisement
ನಾಡದೋಣಿ ಮೀನುಗಾರಿಕೆ ನಡೆಸುವ ಸಂದರ್ಭ ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಡಳಿತ ಸೂಚನೆ ಕೊಟ್ಟಿತ್ತು. ಸಾಮಾಜಿಕ ಅಂತರದ ಜೊತೆಗೆ ಹೆಚ್ಚು ಜನ ಗುಂಪುಗೂಡುವಂತಿಲ್ಲ ಎಂದಿತ್ತು. ಎಲ್ಲ ನಿಯಮಗಳನ್ನು ಅಳವಡಿಸಿಕೊಂಡು ಮೀನುಗಾರರು ಮತ್ತೆ ತಮ್ಮ ಜೀವನವನ್ನು ಶುರು ಮಾಡಿದ್ದಾರೆ. ಅಲೆಗಳ ಮಧ್ಯೆ ಪ್ರಾಣವನ್ನು ಪಣಕ್ಕಿಟ್ಟು ತಂದ ಮೀನಿಗೆ ದುಬಾರಿ ಬೆಲೆ ಫಿಕ್ಸ್ ಮಾಡಬಾರದು ಎಂದು ಕಂದಾಯ ಇಲಾಖೆ ಮತ್ತು ಪೊಲೀಸರು ಮೀನುಗಾರರಿಗೆ ತಾಕೀತು ಮಾಡಿದೆ. ಕೆಲ ಮೀನುಗಾರರಲ್ಲಿ ಇದು ಅಸಮಾಧಾನಕ್ಕೆ ಕಾರಣವಾಗಿದೆ.
Advertisement
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮೀನುಗಾರ ರಮೇಶ್ ಕಾಂಚನ್, ನಾವು ಕಡಲಿನ ನಿಯಮಕ್ಕೆ ತಲೆ ಬಾಗುತ್ತೇವೆ. ನಿಯಮದಂತೆ ಮೀನು ಹಿಡಿದು ಬಂದು ಜೀವನ ಮಾಡುತ್ತೇವೆ. ಆದ್ರೆ ಬಂದ ಮೇಲೆ ರೂಲ್ಸ್ ಹಾಕುತ್ತೇನೆ ಅಂತ ಹೇಳುವುದು ನಮಗೆ ಬೇಸರವಾಗಿದೆ. ಒಂದೆರಡು ಸಾವಿರದ ಮೀನು ಹಿಡಿದು ಅಷ್ಟಕ್ಕೇ ಮಾರಬೇಕು ಅಂತ ಹೇಳಿದ್ರೆ ಕಷ್ಟ ಎಂದಿದ್ದಾರೆ.
ಕಳೆದ ಇಪ್ಪತ್ತು ದಿನಗಳಿಂದ ಸ್ಥಗಿತವಾಗಿದ್ದ ಮೀನುಗಾರಿಕೆಯಿಂದ ಇದೀಗ ಮೊಗವೀರರು ದುಡಿಯುವಂತಾಗಿದೆ. ಬಾಯಿ ಸಪ್ಪೆ ಸಪ್ಪೆ ಎಂದು ಚಡಪಡಿಸುತ್ತಿದ್ದ ಮೀನು ಪ್ರಿಯರು ಮಾಂಸದ ರುಚಿ ನೋಡುವಂತಾಗಿದೆ.