ದೇಶದಲ್ಲಿ ಒಂದೇ ದಿನ 1,400 ಮಂದಿಗೆ ಕೊರೊನಾ

Public TV
2 Min Read
Coronavirus in India

– 28 ಸಾವಿರ ದಾಟಿದ ಸೋಂಕಿತರ ಸಂಖ್ಯೆ
– ವಿಶ್ವದಲ್ಲಿ 30 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ, 2 ಲಕ್ಷ ಸಾವು

ನವದೆಹಲಿ: ದೇಶಾದ್ಯಂತ ಕೊರೊನಾ ರಣಕೇಕೆ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,400 ಮಂದಿಗೆ ಸೋಂಕು ತಗುಲಿದ್ದು, ಬಾಧಿತರ ಸಂಖ್ಯೆ 28 ಸಾವಿರದ ಗಡಿ ದಾಟಿದೆ. ಇದುವರೆಗೂ 886 ಮಂದಿ ಸಾವನ್ನಪ್ಪಿದ್ದಾರೆ.

ಕೊರೊನಾ ಸೋಂಕಿನಿಂದ ದೇಶದಲ್ಲಿ 6,573 ಮಂದಿ ಗುಣಮುಖರಾಗಿದ್ದು, ಚೇತರಿಕೆಯ ಪ್ರಮಾಣ ಶೇ.22.17ಕ್ಕೆ ಏರಿಕೆಯಾಗಿದೆ. ಕಳೆದ 28 ದಿನಗಳಿಂದ ದೇಶದ 16 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಕಂಡುಬಂದಿಲ್ಲ. ಕಳೆದ 14 ದಿನಗಳಿಂದ 85 ಜಿಲ್ಲೆಗಳಲ್ಲಿ ಹೊಸ ಪ್ರಕರಣ ಬೆಳಕಿಗೆ ಬಂದಿಲ್ಲ. ಆದರೆ ಕೇರಳದಲ್ಲಿ 25 ಮಂದಿಗೆ ಸೊಂಕು ಹೇಗೆ ಹಬ್ಬಿದೆ ಎಂದು ಗೊತ್ತಾಗುತ್ತಿಲ್ಲ. ಹೀಗಾಗಿ ಕೊರೊನಾ ಮೂರನೇ ಹಂತ ತಲುಪಿದೆಯೇ ಎಂಬ ಆತಂಕ ಕೇರಳದ ಜನತೆಗೆ ಎದುರಾಗಿದೆ.

Corona A 2

ಇಂದು ಸಹ ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, 440 ಹೊಸ ಪ್ರಕರಣಗಳು ಕಂಡುಬಂದಿವೆ. ಈ ಮೂಲಕ ಸೋಂಕಿತರ ಸಂಖ್ಯೆ 8,068ಕ್ಕೆ ಏರಿದೆ. ಒಂದೇ ದಿನ 19 ಜನ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಈ ವರೆಗೆ ಒಟ್ಟು 342 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಗುಜರಾತ್‍ನಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಒಂದೇ ದಿನ 230 ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 3,301ಕ್ಕೆ ಏರಿಕೆಯಾಗಿದೆ. ಒಂದೇ ಸಿನ 18 ಜನ ಸಾವನ್ನಪ್ಪಿದ್ದಾರೆ. ಒಟ್ಟು 151 ಜನ ಅಸುನೀಗಿದ್ದಾರೆ.

ಕಳೆದ ಎರಡ್ಮೂರು ದಿನಗಳಿಂದ ನಿಯಂತ್ರಣದಲ್ಲಿದ್ದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಒಂದೇ ದಿನ 293 ಪ್ರಕರಣಗಳು ಪತ್ತೆಯಾಗಿವೆ. 54 ಜನ ಸಾವನ್ನಪ್ಪಿದ್ದಾರೆ. ಒಟ್ಟು 2,918 ಜನರಿಗೆ ಸೋಂಕು ತಗುಲಿದೆ.

Corona 26

ವಿಶ್ವದೆಲ್ಲೆಡೆ ದಿನದಿನಕ್ಕೂ, ಕ್ಷಣಕ್ಷಣಕ್ಕೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ 30 ಲಕ್ಷಕ್ಕೂ ಹೆಚ್ಚು ಜನರನ್ನು ಬಾಧಿಸಿದೆ. ಇದುವರೆಗೆ 2 ಲಕ್ಷಕ್ಕೂ ಹೆಚ್ಚು ಜನರನ್ನು ಈ ಹೆಮ್ಮಾರಿ ಬಲಿ ಪಡೆದಿದೆ. ಸುಮಾರು 9 ಲಕ್ಷದಷ್ಟು ಜನ ಸೋಂಕಿನಿಂದ ಗುಣಮುಖರಾಗಿದ್ದು, 19 ಲಕ್ಷ ಮಂದಿ ಈ ಕ್ರೂರ ರೋಗದಿಂದ ಬಳಲುತ್ತಿದ್ದಾರೆ. ಪ್ರಪಂಚದಾದ್ಯಂತ 3ನೇ 1ರಷ್ಟು ಸೋಂಕಿತರು ಅಮೆರಿಕದಲ್ಲೇ ಇರುವುದು ವಿಶ್ವದ ದೊಡ್ಡಣ್ಣನಿಗೆ ಭಾರಿ ಏಟು ಕೊಟ್ಟಿದೆ. ಅಮೆರಿಕಾ ಒಂದರಲ್ಲೇ 55 ಸಾವಿರಕ್ಕೂ ಹೆಚ್ಚು ಜನ ಈ ರೋಗದಿಂದ ಮೃತಪಟ್ಟಿರುವುದು ಕೊರೊನಾದ ಭೀಕರತೆಯನ್ನು ಸ್ಪಷ್ಟಪಡಿಸುತ್ತಿದೆ. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 9,90,021ಕ್ಕೆ ಏರಿದೆ. ರಷ್ಯಾ ಕೂಡ ಕೊರೊನಾ ಕಬಂಧ ಬಾಹುವಿನಲ್ಲಿ ಸಿಲುಕಿದ್ದು ಇಂದು ಒಂದೇ ದಿನ 6 ಸಾವಿರ ಜನರಲ್ಲಿ ಸೋಂಕು ಪತ್ತೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *