– ಸರ್ಕಾರದ ಮಹತ್ವದ ಆದೇಶದ ಹಿಂದಿದೆ ಆ ಮೂರು ಕಾರಣ
– ಕೊರೊನಾ ಕರ್ನಾಟಕ ರೆಡ್ ಅಲರ್ಟ್
ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಒಂದು ವಾರದ ಮಟ್ಟಿಗೆ ಕರ್ನಾಟಕ ತಾತ್ಕಾಲಿಕವಾಗಿ ಬಂದ್ ಆಗಲಿದೆ. ಒಂದು ವಾರ ಬಂದ್ ನಿರ್ಧಾರ ತೆಗೆದುಕೊಳ್ಳಲು ಪ್ರಮುಖ ಕಾರಣ ಒಂದು ಆಶೀರ್ವಾದವಂತೆ.
ಕೊರೊನಾ ವೈರಸಿಗೆ ದೇಶದಲ್ಲಿ ಮೊದಲು ಎಂಬಂತೆ ಕಲಬುರಗಿ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ಸಿಎಂ ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಅಶ್ವತ್ಥ್ ನಾರಾಯಣ, ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಶಿಕ್ಷಣ ಸಚಿವ ಸುರೇಶ್ ಕುಮಾರ್, ಡಾ. ದೇವಿಶೆಟ್ಟಿ ಸೇರಿದಂತೆ ಸರ್ಕಾರದ ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.
ಮುಖ್ಯಮಂತ್ರಿ ಶ್ರೀ @BSYBJP ಅವರು, ಕರೊನಾ ವೈರಸ್ ಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆ ನಡೆಸಿದರು.
ಉಪ ಮುಖ್ಯಮಂತ್ರಿಗಳಾದ @GovindKarjol, @drashwathcn, ಸಚಿವರಾದ @sriramulubjp , @nimmasuresh, @mla_sudhakar, ಡಾ. ದೇವಿಶೆಟ್ಟಿ, ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್, ಸಿಎಂ ಅವರ ಸಲಹೆಗಾರ ಎಂ ಲಕ್ಷ್ಮೀನಾರಾಯಣ್ ಇದ್ದರು pic.twitter.com/f8amYTwIrb
— CM of Karnataka (@CMofKarnataka) March 13, 2020
ಸಭೆಯಲ್ಲಿ ಕಲಬರುಗಿ ಪ್ರಕರಣದ ಬಗ್ಗೆ ಚರ್ಚೆ ನಡೆದಾಗ ಆರೋಗ್ಯ ಇಲಾಖೆ ಅಧಿಕಾರಿಗಳು, ಉಮ್ರಾದಿಂದ ಬಂದ ಬಳಿಕ ಕೊರೊನಾ ಸೋಂಕಿತ ವ್ಯಕ್ತಿಯ ಕಾಲನ್ನು ಮುಟ್ಟಿ ಹಲವು ಜನ ಆಶೀರ್ವಾದ ಪಡೆದಿದ್ದಾರೆ. ಮೆಕ್ಕಾ ಮದೀನಾಕ್ಕೆ ಹೋಗಿ ಬಂದ ಕಾರಣ ಸಂಪ್ರದಾಯದಂತೆ ಕಾಲು ಮುಟ್ಟಿ ನಮಸ್ಕರಿಸಿದ್ದರು. ಹೀಗಾಗಿ ಆಶೀರ್ವಾದ ಪಡೆದ ವ್ಯಕ್ತಿಗಳಿಗೂ ಸೋಂಕು ಬಂದಿರುವ ಸಾಧ್ಯತೆಯಿದೆ. ಇದರ ಜೊತೆ ಅವರು ಸಂಪರ್ಕಕ್ಕೆ ಬಂದವರಿಗೂ ಇದು ಬರಬಹುದು ಎನ್ನುವ ವಿಚಾರವನ್ನು ಗಮನಕ್ಕೆ ತಂದಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಕುಟುಂಬಸ್ಥರಿಂದ ಪಡೆದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಂತೆ ಸರ್ಕಾರಕ್ಕೆ ತೀವ್ರತೆಯ ಅರಿವಾಗಿದೆ.
ಇನ್ನು ಕೇರಳದಲ್ಲೂ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಅಲ್ಲಿಯ ಜನ ಕರ್ನಾಟಕಕ್ಕೆ ಬರುವುದರಿಂದ ಸಮಸ್ಯೆ ಜಾಸ್ತಿಯಾಗಬಹುದು ಎಂದು ಸಭೆಯಲ್ಲಿದ್ದ ವೈದ್ಯರು ತಿಳಿಸಿದ್ದಾರೆ. ಇದರ ಜೊತೆ ಕೇಂದ್ರ ಸರ್ಕಾರ ಕಲಬುರಗಿ ಪ್ರಕರಣವನ್ನು ಆರೋಗ್ಯ ಇಲಾಖೆ ನಿರ್ಲಕ್ಷ್ಯಸಿದ್ದಕ್ಕೆ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ವ್ಯಕ್ತಿಯಿಂದ ಅರ್ಶೀವಾದ ಪಡೆದವರ ಎಲ್ಲರ ವಿವರ ಕಲೆಹಾಕಿ ಗೃಹಬಂಧನದಲ್ಲಿ ಇಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಇದನ್ನು ಓದಿ: ಮದ್ವೆ ನಿಗದಿಯಾಗಿದ್ರೆ ಏನು ಕಥೆ? ಯಾವುದೆಲ್ಲ ಬಂದ್? ಇಲ್ಲಿದೆ ಪೂರ್ಣ ವಿವರ
ಈ ನಡುವೆ ರಾಜ್ಯದ ಬೆಂಗಳೂರಿನಲ್ಲೂ ಸೋಂಕು ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೇವಿಶೆಟ್ಟಿ ಸೇರಿದಂತೆ ಹಲವು ವೈದ್ಯರು, ಒಂದು ವಾರಗಳ ಕಾಲ ಸಾರ್ವಜನಿಕವಾಗಿ ಜನ ಹೆಚ್ಚು ಸೇರದಂತೆ ಮಾಡಬೇಕು. ಹೀಗಾಗಿ ಹೆಚ್ಚು ಜನ ಸೇರುವ ಸಾರ್ವಜನಿಕ ಸ್ಥಳವನ್ನು ಬಂದ್ ಮಾಡಿ ಕಾರ್ಯಕ್ರಮಗಳನ್ನು ನಿರ್ಬಂಧಿಸುವುದು ಉತ್ತಮ ಎಂಬ ಸಲಹೆ ನೀಡಿದ್ದಾರೆ.
ಬಂದ್ ಸಲಹೆ ಕೇಳಿ ಸಿಎಂ ಯಾವುದೇ ಕಾರಣ ಬಂದ್ ಮಾಡಲು ಆದೇಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಕಲಬುರಗಿ ವ್ಯಕ್ತಿಯಿಂದ ಆಶೀರ್ವಾದ ಪಡೆದ ವ್ಯಕ್ತಿಗಳಿಂದ ಮತ್ತಷ್ಟು ಜನರಿಗೆ ಸೋಂಕು ಹರಡಿದರೆ ನಿಯಂತ್ರಣ ಮಾಡಲು ಯಾರಿಂದಲೂ ಸಾಧ್ಯವೇ ಇಲ್ಲ. ಇದು ಬಹಳ ಕಷ್ಟವಾಗುತ್ತದೆ ಎಂದು ಹೇಳಿದಾಗ ಸಿಎಂ ಶಾಕ್ ಆಗಿದ್ದಾರೆ. ವಿಶ್ವದ ವಿವಿಧ ದೇಶಗಳಿಗೆ ಕೊರೊನಾ ಬಂದಿದ್ದು ಹೇಗೆ? ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮವನ್ನು ತಿಳಿಸಿದಾಗ ಸಿಎಂ ಒಂದು ವಾರ ಕಾಲ ಬಂದ್ ಮಾಡುವ ನಿರ್ಧಾರಕ್ಕೆ ಒಪ್ಪಿಗೆ ನೀಡಿದರು ಎನ್ನುವ ವಿಚಾರವನ್ನು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.