ಬೆಂಗಳೂರು: ಎಲ್ಲ ನಟ ನಟಿಯರು ಇದೀಗ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದು, ಕೆಲವರು ಕುಟುಂಬದ ಜೊತೆಗೆ ಕಾಲ ಕಳೆಯುತ್ತಿದ್ದರೆ, ಇನ್ನೂ ಕೆಲವರು ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಹಲವು ನಟ, ನಟಿಯರು ತಮ್ಮ ಮನೆಯಲ್ಲೇ ವಿವಿಧ ಚಟುವಟಿಕೆಗಳನ್ನು ಮಾಡುವ ಮೂಲಕ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದಾರೆ. ಅದರಂತೆ ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಸಹ ತಮ್ಮ ಊರಿಗೆ ತೆರಳಿ ಅಪ್ಪನಿಗೆ ಸಹಾಯ ಮಾಡುತ್ತಿದ್ದಾರೆ.
Advertisement
ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರಿಗೆ ಸ್ಯಾಂಡಲ್‍ವುಡ್ ಮಾತ್ರವಲ್ಲದೆ ತಮಿಳಿನಿಂದಲೂ ಆಫರ್‍ಗಳು ಬುರತ್ತಿವೆ. ಇಷ್ಟಾದರೂ ರವಿ ಅವರು ಮಾತ್ರ ಇದೆಲ್ಲವನ್ನೂ ಬಿಟ್ಟು ತಮ್ಮ ಊರಿಗೆ ತೆರಳಿ ಕಮ್ಮಾರಿಕೆ ಕೆಲಸದಲ್ಲಿ ನಿರತರಾಗಿದ್ದಾರೆ. ಅರೇ ಇದೇನು ಇವರೇಕೆ ಈ ಕೆಲಸಕ್ಕೆ ಮರಳಿದರು ಎಂದು ಯೋಚಿಸಬೇಡಿ, ಎಲ್ಲ ಕೊರೊನಾ ಮಾಯೆ. ರವಿ ಬಸ್ರೂರು ಅವರು ಶಾಶ್ವತವಾಗಿ ಕಮ್ಮಾರಿಕೆ ಕೆಲಸಕ್ಕೆ ಇಳಿದಿಲ್ಲ. ಬದಲಿಗೆ ಕೊರೊನಾದಿಂದಾಗಿ ಸ್ವಯಂ ದಿಗ್ಬಂಧನ ವಿಧಿಸಿಕೊಂಡು ಊರಲ್ಲಿ ಕೆಲಸದಲ್ಲಿ ತೊಡಗಿದ್ದು, ಈ ಮೂಲಕ ತಮ್ಮ ತಂದೆಗೆ ಸಹಾಯ ಮಾಡುತ್ತಿದ್ದಾರೆ.
Advertisement
Advertisement
ಬಹುತೇಕರು ಕೆಲ ದಿನಗಳ ಕಾಲ ಬಿಡುವು ಸಿಕ್ಕಿದೆ ಎಂದು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ ರವಿ ಬಸ್ರೂರು ಅವರು ಮಾತ್ರ ಮನೆಯಲ್ಲಿಯೂ ಸಹ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಕೊರೊನಾದಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅವರು ತಮ್ಮ ಊರು ಕುಂದಾಪುರ ಬಳಿಯ ಬಸ್ರೂರಿಗೆ ತೆರಳಿದ್ದು, ಅಲ್ಲಿ ತಮ್ಮ ತಂದೆಗೆ ಸಹಾಯ ಮಾಡುತ್ತಿದ್ದಾರೆ.
Advertisement
ಕಮ್ಮಾರಿಕೆ ಕೆಲಸದಲ್ಲಿ ತೊಡಗಿರುವ ಕುರಿತು ಫೇಸ್ಬುಕ್‍ನಲ್ಲಿ ಹಂಚಿಕೊಂಡಿದ್ದು, ಅಪ್ಪಯ್ಯಂಗೆ ಜೈ, ಇವತ್ 35 ರೂಪಾಯ್ ದುಡಿಮೆ, ತಲೆಬಿಸಿ ಫುಲ್ ಕಮ್ಮಿ ಆಯ್ತು ಎಂದು ಬರೆದುಕೊಂಡಿದ್ದಾರೆ. ಕೈಯಲ್ಲಿ ಸುತ್ತಿಗೆ ಹಿಡಿದು ಹಾರೆಯನ್ನು ಹರಿತಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹಾರೆಗೆ ಏಟುಗಳ ಮೇಲೆ ಏಟು ಕೊಟ್ಟು ಹರಿತಗೊಳಿಸಿದ್ದಾರೆ. ಈ ಕುರಿತು ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ ಫೇಸ್ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.
ಕಮ್ಮಾರಿಕೆ ರವಿ ಬಸ್ರೂರು ಅವರ ಕುಲ ಕಸುಬು. ಅವರ ತಂದೆಯವರು ಇನ್ನೂ ಸಹ ಅದೇ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ರವಿ ಬಸ್ರೂರು ಅವರು ತಂದೆಗೆ ಸಹಾಯ ಮಾಡಿದ್ದಾರೆ. ಅಲ್ಲದೆ ಕಮ್ಮಾರಿಕೆ ಕೆಲಸ ಮಾಡಿ ದಿನಕ್ಕೆ 35 ರೂ.ಸಂಪಾದಿಸಿದ್ದಾರೆ.