– 10 ಚೀಲದಷ್ಟು ಸುರಿದ ಎಲ್ಲವನ್ನೂ ಬಾಚಿಕೊಂಡ್ರು
ಮಡಿಕೇರಿ: ಕೊರೊನಾ ವೈರಸ್ ಭೀತಿ ಒಂದು ಕಡೆಯಾದರೆ, ಮತ್ತೊಂದು ಕಡೆ ರೈತ ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ಸರಿಯಾದ ವ್ಯವಸ್ಥೆ ಇಲ್ಲ. ಇದರಿಂದ ಮಾಜಿ ಸೈನಿಕರೊಬ್ಬರು ತಮ್ಮ ಒಂದು ಎಕರೆ ಭೂಮಿಯಲ್ಲಿ ಬೆಳೆದ ಹಸಿಮೆಣಸಿನಕಾಯಿಯನ್ನು ರಸ್ತೆಗೆ ಚೆಲ್ಲಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯಲ್ಲಿ ನಡೆದಿದೆ.
ಕೊಡ್ಲಿಪೇಟೆ ಹೊಸಮುನ್ಸಿಪಾಲ್ಟಿ ನಿವಾಸಿ ನಿವೃತ ಯೋಧ ದೇವರಾಜ್ ಅವರು ಮೆಣಸಿನಕಾಯಿಯನ್ನ ರಸ್ತೆಗೆ ಚೆಲ್ಲಿದ್ದಾರೆ. ಒಂದು ಎಕರೆಯಲ್ಲಿ ಬೆಳೆದಿದ್ದ ಹಸಿರುಮೆಣಸಿಕಾಯಿ ಕಟಾವಿಗೆ ಬಂದಿತ್ತು. ಆದರೆ ಕೊರೊನಾದಿಂದ ದೇಶವೇ ಲಾಕ್‍ಡೌನ್ ಆಗಿರುವ ಕಾರಣದಿಂದಾಗಿ ರೈತರಿಂದ ಉತ್ತಮ ಬೆಲೆಗೆ ಖರೀದಿಸುವವರಿಲ್ಲ. ಇತ್ತ ಮೆಣಸಿನಕಾಯಿ ಹಣ್ಣಾಗಿ ಕೊಳೆತು ಹೋಗುವ ಪರಿಸ್ಥಿತಿಯನ್ನು ಕಂಡ ದೇವರಾಜ್ ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ಮೆಣಸಿನಕಾಯಿಯನ್ನ ಸುರಿದು ಜನರಿಗೆ ಉಚಿತವಾಗಿ ತೆಗೆದುಕೊಂಡು ಹೋಗುವಂತೆ ಕೂಗಿ ಹೇಳಿದ್ದಾರೆ.
Advertisement
Advertisement
ಇದನ್ನು ಕಂಡು ಜನರು ಮುಗಿಬಿದ್ದು ತಮಗೆ ಬೇಕಾದಷ್ಟು ಮೆಣಸಿನಕಾಯಿಯನ್ನು ಬಾಚಿಕೊಂಡು ಹೋಗಿದ್ದಾರೆ. ಸುಮಾರು 20 ಕೆ.ಜಿ ತೂಕದ ಹತ್ತು ಚೀಲದಷ್ಟು ಮೆಣಸಿನಕಾಯಿ ರಸ್ತೆಯಲ್ಲಿ ಸುರಿದ್ದನ್ನು ಒಂದು ಬೀಡದೆ ಜನರು ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಜನರು ಸಾಮಾಜಿಕ ಅಂತರವನ್ನು ಕೂಡ ಕಾಯ್ದುಕೊಂಡಿಲ್ಲ.
Advertisement
ಈ ವ್ಯಾಪ್ತಿಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ರೈತರು ತಮ್ಮ ಹೊಲ-ಗದ್ದೆಗಳಲ್ಲಿ ಮೆಣಸಿನಕಾಯಿಯನ್ನು ಬೆಳೆಯುತ್ತಾರೆ. ಅವುಗಳೆಲ್ಲ ಇದೀಗ ಕೊಯ್ಲಿಗೆ ಬಂದಿದ್ದರೂ ಮಾರಾಟ ಮಾಡಲು ಮಾರುಕಟ್ಟೆ ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.