-ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ
ಕಾರವಾರ: ಭಟ್ಕಳ ಮೂಲದ 26 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಮಾರ್ಚ್ 20ರಂದು ಕೊರೊನಾ ಸೋಂಕಿತ 26 ವರ್ಷದ ಯುವಕ ತನ್ನ ಅಣ್ಣನೊಂದಿಗೆ ದುಬೈನಿಂದ ಆಗಮಿಸಿದ್ದನು. ದುಬೈನಿಂದ ಗೋವಾಗೆ ಬಂದಿಳಿದ ಇಬ್ಬರನ್ನು ಕರೆತರಲು ಸಂಬಂಧಿ ಕಾರ್ ನಲ್ಲಿ ತೆರಳಿದ್ದರು. ಮೊದಲಿಗೆ ಯುವಕನ ಅಣ್ಣನಲ್ಲಿ ಕೊರೊನಾ ಸೋಂಕು ಕಂಡು ಬಂದಿತ್ತು. ತದನಂತರ ಸಂಬಂಧಿಯಲ್ಲಿಯೂ ಕೊರೊನಾ ಲಕ್ಷಣಗಳು ಕಂಡು ಬಂದಿತ್ತು. ಇದೀಗ ಯುವಕನಿಗೂ ಕೊರೊನಾ ಸೋಂಕು ತಗಲಿದೆ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ.
Advertisement
Advertisement
ಈ ಮಧ್ಯೆ ಇವರು ಪ್ರಯಾಣಿಸಿದ ಕಾರಿನಲ್ಲಿ ಮಹಿಳೆಯೂ ಇದ್ದರು. ಮಹಿಳೆಯನ್ನು ಹೋಮ್ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಗೋವಾದಿಂದ ಭಟ್ಕಳಕ್ಕೆ ಆಗಮಿಸುವ ವೇಳೆ ಮಾರ್ಗ ಮಧ್ಯೆ ಹೋಟೆಲ್ ಗೆ ತೆರಳಿ ತಿಂಡಿ ಸೇವಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಹೋಟೆಲ್ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಹೋಟೆಲ್ ಗೆ ರಾಸಾಯನಿಕ ಸಿಂಪಡಿಸಿ ಸ್ವಚ್ಛಗೊಳಿಸಲಾಗಿದೆ. ಭಟ್ಕಳದಲ್ಲಿ ಸೋಂಕಿತರು ಭೇಟಿಯಾದ ಜನರ ಆರೋಗ್ಯದ ಮೇಲೆ ಜಿಲ್ಲಾಡಳಿತ ನಿಗಾ ಇರಿಸಿದೆ.
Advertisement
Advertisement
ಇದೀಗ ಒಂದೇ ಕುಟುಂಬದ ಮೂವರಿಗೆ ಸೋಂಕು ತಗುಲಿದ್ದು, ಭಟ್ಕಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಯುವಕನ್ನು ಭಟ್ಕಳದ ತಾಲೂಕು ಆಸ್ಪತ್ರೆಯಿಂದ ಕಾರವಾರದ ಪತಂಜಲಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ.