– ಊರಿನತ್ತ ಮುಖ ಮಾಡಿದ್ದಾರೆ ವಿದ್ಯಾರ್ಥಿಗಳು, ಕೆಲಸಗಾರರು
ಬೆಂಗಳೂರು: ಕೊರೊನಾ ವೈರಸ್‍ನಿಂದಾಗಿ ವಿಶ್ವವೇ ಬೆಚ್ಚಿವಿದ್ದಿದ್ದು, ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತಿದೆ. ಇದೀಗ ಸಿಲಿಕಾನ್ ಸಿಟಿಯಲ್ಲೂ ಅದೇ ವಾತಾವರಣ ನಿರ್ಮಾಣವಾಗಿದ್ದು, ಜನ ಬೆಂಗಳೂರು ತೊರೆದು ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಹಾಸ್ಟೆಲ್, ಪಿಜಿಗಳಲ್ಲಿ ಉಳಿದುಕೊಂಡವರು ಸಹ ಮುಂಜಾಗೃತ ಕ್ರಮವಾಗಿ ಊರುಗಳಿಗೆ ತೆರಳಿ ಎಂದು ಪಾಲಿಕೆ ಆದೇಶ ನೀಡಿದೆ. ಈ ಹಿನ್ನೆಲೆ ಎಲ್ಲ ಖಾಲಿ, ಖಾಲಿ ಎನ್ನುವಂತಾಗಿದೆ.
ಬಿಬಿಎಂಪಿ ಆದೇಶದ ಮುನ್ನವೇ ಹಲವು ವಿದ್ಯಾರ್ಥಿಗಳು ಹಾಗೂ ಕೆಲಸ ಮಾಡಿಕೊಂಡು ಪಿಜಿಯಲ್ಲಿದ್ದವರು ಪಿಜಿ, ಹಾಸ್ಟೆಲ್ ಬಿಟ್ಟು ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಸರ್ಕಾರಿ ಹಾಸ್ಟೆಲ್ ಗಳಲ್ಲಿರುವ ವಿದ್ಯಾರ್ಥಿಗಳು ಬುಕ್ಸ್, ಬಟ್ಟೆ ಸಮೇತ ಬೆಂಗಳೂರು ತೊರೆದಿದ್ದಾರೆ. ಖಾಲಿಯಾಗಿರುವ ಹಾಸ್ಟೆಲ್ ಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.
ಪಿಜಿಗಳಲ್ಲಿರುವವರು ಕೂಡ ತಮ್ಮ ಊರುಗಳಿಗೆ ತೆರಳುವಂತೆ ನಿರ್ದೇಶನ ನೀಡಲಾಗಿದೆ. ನಗರದ ಬಹುತೇಕ ಪಿಜಿಗಳಲ್ಲಿ ಜನ ಕಡಿಮೆಯಾಗಿದ್ದಾರೆ. ಇನ್ನೂ ಕೆಲವರು ಪಿಜಿಗಳಲ್ಲಿಯೇ ಉಳಿದುಕೊಂಡಿದ್ದು, ಪಿಜಿಗಳಿಂದ ಹೊರಗಡೆ ಕಳಿಸಿದರೆ ಎಲ್ಲಿಗೆ ಹೋಗುವುದು, ಕೆಲಸಕ್ಕೆ ಸಮಸ್ಯೆಯಾಗುತ್ತೆ. ಬೆಂಗಳೂರಿನಲ್ಲಿ ಉಳಿದುಕೊಳ್ಳೋಕೆ ಮನೆಗಳಿಲ್ಲ ಎಂಬುದು ಪಿಜಿ ನಿವಾಸಿಗಳ ಅಳಲು.
ರಾಜಸ್ಥಾನ, ಗುಜರಾತ್, ಕೊಲ್ಕತಾ ಸೇರಿದಂತೆ ಬೇರೆ ರಾಜ್ಯಗಳ ಜನ ಪಿಜಿಗಳಲ್ಲಿ ಉಳಿದುಕೊಂಡಿದ್ದಾರೆ. ಏಕಾಏಕಿ ಪಿಜಿಗಳಿಂದ ಹೊರ ಕಳುಹಿಸಿದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಪಿಜಿಯಲ್ಲಿ ಉಳಿದುಕೊಂಡವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇಗಾಗಲೇ ಶೇಷಾದ್ರಿಪುರ, ಮಲ್ಲೇಶ್ವರ, ಶಾಂತಿನಗರ, ಜಯನಗರ ಸೇರಿದಂತೆ ಬಹುತೇಕ ಪಿಜಿಗಳಲ್ಲಿ ಶೇ.40 ರಷ್ಟು ಜನ ಖಾಲಿಯಾಗಿದ್ದಾರೆ. ಉಳಿದವರು ಸಹ ಪಿಜಿ ತೊರೆಯುತ್ತಿದ್ದಾರೆ.