ಉಡುಪಿ: ಕೊರೊನಾ ವೈರಸ್‍ನಿಂದ ದೇಶಕ್ಕೆ ಬೀಗ ಹಾಕಲಾಗಿದೆ. ಬ್ಯಾಂಕ್‍ಗಳ EMI ಪಾವತಿಸಲು ಆರ್‌ಬಿಐ ವಿನಾಯಿತಿ ಕೊಟ್ಟಿದೆ. ಈ ನಡುವೆ ಸಂಪೂರ್ಣ ಲಾಕ್‍ಡೌನ್ ಆಗಿರುವ ಜಿಲ್ಲೆಯಲ್ಲಿ ಕಾಂಪ್ಲೆಕ್ಸ್ ಮಾಲೀಕರೊಬ್ಬರು ತನ್ನ ಅಂಗಡಿಗಳಿಗೆ ಬಾಡಿಗೆ ವಿನಾಯಿತಿ ಮಾಡಿದ್ದಾರೆ.
ಕುಂದಾಪುರ ಉಳ್ತೂರು ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಎಲ್ಲಾ ಅಂಗಡಿಗಳಿಗೆ ರಿಯಾಯಿತಿ ನೀಡುವುದಾಗಿ ಮಾಲೀಕ ರಮೇಶ್ ಅಡಿಗ ಘೋಷಣೆ ಮಾಡಿದ್ದಾರೆ. ಕುಂದಾಪುರ ತಾಲೂಕಿನ ಉಳ್ತೂರು ಗ್ರಾಮದಲ್ಲಿರುವ ಈ ಕಾಂಪ್ಲೆಕ್ಸ್‌ನ ಬಾಡಿಗೆದಾರರಿಗೆ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿದ್ದೇನೆ. ಸಂದರ್ಭಕ್ಕೆ ಅನುಗುಣವಾಗಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಮೇಶ್ ಅಡಿಗ, ಬಾಡಿಗೆದಾರರು ವ್ಯಾಪಾರ ಮಾಡದೆ ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ಅವರಿಂದ ಬಾಡಿಗೆ ತೆಗೆದುಕೊಳ್ಳಲು ಮನಸ್ಸಾಗುತ್ತಿಲ್ಲ. ಒಂದು ತಿಂಗಳ ಬಾಡಿಗೆ ಪಡೆಯದಿದ್ದರೆ ನಮಗೆ ಲಾಭ ಆಗದೇ ಇರಬಹುದು. ಆದರೆ ನಷ್ಟ ಆಗುವುದಿಲ್ಲ. ನಮ್ಮಲ್ಲಿರುವ ಎಲ್ಲ ಬಾಡಿಗೆದಾರರು ಇಲ್ಲಿ ನಡೆಯುವ ವ್ಯಾಪಾರವನ್ನು ಅವಲಂಬಿಸಿಯೇ ಜೀವನ ಮಾಡುತ್ತಿದ್ದಾರೆ ಎಂದರು.
ಈಗಾಗಲೇ ಅವರು ಅವರ ಜೀವನೋಪಾಯಕ್ಕಾಗಿ ಸಾಲಗಳನ್ನು ಮಾಡಿದ್ದು, ಕಂತು ಕಟ್ಟಲು ಬಹಳ ಕಷ್ಟಪಡುತ್ತಿರುವ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆಯುವುದು ನನಗೆ ಯಾಕೋ ಸರಿ ಅನ್ನಿಸಲಿಲ್ಲ. ನನ್ನದು ಸಣ್ಣ ಕಾಂಪ್ಲೆಕ್ಸ್ ಹಳ್ಳಿ ಭಾಗದಲ್ಲಿದೆ. ಪೇಟೆಯಲ್ಲಿರುವ ಕಾಂಪ್ಲೆಕ್ಸ್‌ಗಳು ಕೂಡ ಇದೇ ನಿರ್ಧಾರವನ್ನು ಮಾಡಬೇಕು. ಜನಸಾಮಾನ್ಯರ ಮೇಲಿನ ಹೊರೆಯನ್ನು ಕೊಂಚ ಮಟ್ಟಿಗೆ ಇಳಿಸಬೇಕು ಎಂದು ವಿನಂತಿ ಮಾಡಿಕೊಂಡರು.