ಮಂಗಳೂರು: ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕೊರೊನಾ ಹಾಗೂ ನಿಫಾ ಆತಂಕ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಎರಡು ತಿಂಗಳುಗಳ ಕಾಲ ಕೇರಳದಿಂದ ಜಿಲ್ಲೆಗೆ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ತುರ್ತು ಕಾರಣವಿಲ್ಲದೆ ಯಾರೂ ಅನಗತ್ಯ ಪ್ರಯಾಣಿಸಬೇಡಿ ಎಂದು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.
ಕೇರಳದಲ್ಲಿ ಕೋವಿಡ್ ಕೇಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸದ್ಯ ಕೋವಿಡ್ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ. ಇದರ ಜೊತೆಗೆ ನಿಫಾ ವೈರಸ್ ಸಹ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದೆಲ್ಲದರ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೊರೊನಾ ಪಾಸಿಟಿವ್ ಪ್ರಕರಣ ದಿನಿನಿತ್ಯ 200 ಮೇಲೆ ಬರ್ತಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಕೇರಳದಿಂದ ದ.ಕ ಜಿಲ್ಲೆಗೆ ಬರುವವರು ಹಾಗೂ ಅಲ್ಲಿಗೆ ತೆರಳುವವರಿಗೆ ನಿರ್ಬಂಧ ವಿಧಿಸಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಸೂಚನೆಗಳನ್ನು ನೀಡಿದ್ದು, ಕೇರಳದಿಂದ ಬರುವ ಪ್ಯಾರಾ ಮೆಡಿಕಲ್, ನರ್ಸಿಂಗ್ ಸೇರಿದಂತೆ ವಿದ್ಯಾರ್ಥಿಗಳು ಸಹ ಅಕ್ಟೋಬರ್ ಅಂತ್ಯವರೆಗೆ ಮಂಗಳೂರಿಗೆ ಬರಬೇಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾರವಾರ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಆಮೆ ಕಳೇಬರ ಪತ್ತೆ
ಕೇರಳದಲ್ಲಿದ್ದವರಿಗೆ ಈ ಬಗ್ಗೆ ಆಯಾ ಶಿಕ್ಷಣ ಸಂಸ್ಥೆ ಸೂಚನೆ ನೀಡುವಂತೆ ಹೇಳಲಾಗಿದೆ. ಇದರ ಜೊತೆಗೆ ಕೇರಳಕ್ಕೆ ತೆರಳುವ ಉದ್ದೇಶ ಇದ್ದವರು ಅಕ್ಟೋಬರ್ ಅಂತ್ಯದವರೆಗೆ ತಮ್ಮ ಪ್ರಯಾಣವನ್ನು ಮುಂದೂಡುವಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಆಸ್ಪತ್ರೆ, ನರ್ಸಿಂಗ್ ಹೋಮ್, ಕಚೇರಿ, ಹೊಟೇಲ್, ಕೈಗಾರಿಕೆಗಳಲ್ಲಿರುವ ಕೇರಳ ಮೂಲದ ಸಿಬ್ಬಂದಿ ಸಹ ಕೇರಳದಿಂದ ಬಂದು ಹೋಗುವುದನ್ನು ಕಡಿಮೆಗೊಳಿಸಿ ಎಂದು ಹೇಳಲಾಗಿದೆ. ಉದ್ಯೋಗದಾತರು ಕೇರಳ ಮೂಲದ ಸಿಬ್ಬಂದಿಯನ್ನು ಪ್ರವೇಶ ಮಾಡದಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ತುರ್ತು ಕಾರಣವಿಲ್ಲದೇ ಪ್ರಯಾಣಿಸಬೇಡಿ ಎಂದು ಜಿಲ್ಲಾಡಳಿತ ಸೂಚಿಸಿದೆ. ಇದನ್ನೂ ಓದಿ: ಇಂದು 1074 ಪಾಸಿಟಿವ್, 4 ಸಾವು – ಪಾಸಿಟಿವಿಟಿ ರೇಟ್ 0.63%ಕ್ಕೆ ಇಳಿಕೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಂಡರೂ ಕೇಸ್ 100ಕ್ಕಿಂತ ಕೆಳಗೆ ಬರುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಜಿಲ್ಲಾಡಳಿತ ನೀಡಿರುವ ಈ ಸೂಚನೆ ಎಷ್ಟು ಪರಿಣಾಮಕಾರಿಯಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.